ಮುದ್ದೇಬಿಹಾಳ: ತೀವ್ರ ಜಿದ್ದಾಜಿದ್ದಿನ ಕಣವಾಗಿದ್ದ ತಾಲೂಕಿನ ಕೋಳೂರು ಗ್ರಾಪಂನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳೆರಡೂ ಕಾಂಗ್ರೆಸ್ ಬೆಂಬಲಿತರ ಪಾಲಾಗಿದ್ದು, ಎರಡೂ ಸ್ಥಾನಗಳಿಗೂ ಲಾಟರಿ ಪ್ರಕ್ರಿಯೆ ಮೂಲಕ ಅನಿರೀಕ್ಷಿತ ಫಲಿತಾಂಶ ಬಂದಿದೆ.
ಓದಿ: ಅಡಕೆ ನುಂಗಿ ಬಾಲಕ ಸಾವು: ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಕಾಂಗ್ರೆಸ್ ಬೆಂಬಲಿತ ಶಂಕ್ರಮ್ಮ ಶಾಂತಯ್ಯ ಒಡೆಯರ್ ಹಾಗೂ ಬಿಜೆಪಿ ಬೆಂಬಲಿತ ಶಿವಮ್ಮ ಈಶ್ವರಪ್ಪ ಢವಳಗಿ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಮಂಜುನಾಥಗೌಡ ಬಸನಗೌಡ ಪಾಟೀಲ ಹಾಗೂ ಬಿಜೆಪಿ ಬೆಂಬಲಿತ ಹಣಮಂತ ನರಸಪ್ಪ ಹುಗ್ಗಿ ನಾಮಪತ್ರ ಸಲ್ಲಿಸಿದ್ದರು. ಒಟ್ಟು ಇಪ್ಪತ್ತು ಸದಸ್ಯ ಬಲವಿರುವ ಪಂಚಾಯಿತಿಯಲ್ಲಿ ಎರಡೂ ಸ್ಥಾನಗಳ ಆಯ್ಕೆಗೆ ಮತದಾನ ನಡೆಸಲಾಯಿತು.
ಮತ ಎಣಿಕೆಯ ಫಲಿತಾಂಶ ಹೊರಬಿದ್ದಾಗ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಸ್ಪರ್ಧಿಸಿದ್ದ ನಾಲ್ವರು ಸ್ಪರ್ಧಿಗಳು ತಲಾ 10 ಮತಗಳನ್ನು ಪಡೆದು ಸಮಾನ ಫಲಿತಾಂಶ ಪಡೆದುಕೊಂಡರು. ಆಗ ಚುನಾವಣಾಧಿಕಾರಿ ಜೆ.ಪಿ. ಶೆಟ್ಟಿ ಲಾಟರಿ ಮೂಲಕ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಸರ್ವ ಸದಸ್ಯರ ಸಹಮತ ಪಡೆದು ಆಯ್ಕೆ ಪ್ರಕ್ರಿಯೆ ಮುಂದುವರೆಸಿದರು.
ಗ್ರಾಮದ ಸನ್ನಿಧಿ ಎಂಬ ಬಾಲಕಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಚೀಟಿ ಎತ್ತಿದಾಗ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಶಂಕ್ರಮ್ಮ ಒಡೆಯರ್ ಹಾಗೂ ಉಪಾಧ್ಯಕ್ಷರಾಗಿ ಮಂಜುನಾಥಗೌಡ ಪಾಟೀಲ ಆಯ್ಕೆಯಾದರು. ಚುನಾವಣಾ ಪ್ರಕ್ರಿಯೆಗೆ ಪಿಡಿಓ ಶಿವನಗೌಡ ಪಾಟೀಲ, ಕಾರ್ಯದರ್ಶಿ ರಂಗರಾಜು ಬಿ.ಆರ್. ಸಹಕಾರ ನೀಡಿದರು.