ವಿಜಯಪುರ : ದೇಶಾದ್ಯಂತ ಜಾರಿಯಾಗಿರುವ ಲಾಕ್‌ಡೌನ್‌ನಿಂದ ಹಾಲು ಉತ್ಪಾದನಾ, ಮಾರಾಟ ಸಂಪೂರ್ಣ ಇಳಿಮುಖವಾಗಿದೆ. ಇದರಿಂದ ರಾಜ್ಯದ ಕೆಎಂಎಫ್ ನಷ್ಟ ಅನುಭವಿಸುತ್ತಿದೆ. ಆದರೆ, ಪಕ್ಕದ ಮಹಾರಾಷ್ಟ್ರದಲ್ಲಿ ಎರಡು ಪ್ರಮುಖ ಹಾಲಿನ ಡೈರಿಗಳು ಲಾಕ್ ಆಗಿವೆ. ಆ ಭಾಗದ ಹಾಲು ಮಾರಾಟ ಮಾಡುವ ರೈತರು ಕರ್ನಾಟಕದತ್ತ ಮುಖಮಾಡಿದ್ದಾರೆ. ಇದನ್ನು ಅರಿತ ಕೆಎಂಎಫ್ ಮುಂದಿನ ದಿನಗಳಲ್ಲಿ ಹೆಚ್ಚು ಹಾಲು ಮಾರಾಟದ ಗುರಿ ಇಟ್ಟಿಕೊಂಡಿದೆ.
ಉತ್ತರಕರ್ನಾಟಕದಲ್ಲಿ ಅತಿ ಹೆಚ್ಚು ಹಾಲು ಹಾಗೂ ಅದಕ್ಕೆ ಸಂಬಂಧಿಸಿದ ಪದಾರ್ಥ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ವಿಜಯಪುರ-ಬಾಗಲಕೋಟೆ ಜಿಲ್ಲಾ ಸಹಕಾರಿ ಹಾಲು ಒಕ್ಕೂಟ ಒಟ್ಟು 436 ಹಾಲು ಉತ್ಪಾದಕರ ಸಹಕಾರಿ ಸಂಘಗಳನ್ನು ಹೊಂದಿದೆ. ಇವರ ಮೂಲಕ ನಿತ್ಯ 1.76 ಲಕ್ಷ ಲೀಟರ್ ಹಾಲು ಸಂಗ್ರಹಿಸುತ್ತಿದೆ. ಇದರಲ್ಲಿ 36 ಸಾವಿರ, ಬಾಗಲಕೋಟೆ 20 ಸಾವಿರ ಹಾಗೂ ಜಮಖಂಡಿ ವಿಭಾಗದಿಂದ 1.20 ಲಕ್ಷ ಲೀಟರ್ ಸೇರಿ ಒಟ್ಟು ನಿತ್ಯ 1.76 ಲಕ್ಷ ಲೀಟರ್ ಹಾಲು ಸಂಗ್ರಹಿಸುತ್ತಿದೆ. ಆದರೆ, ಲಾಕ್‌ಡೌನ್ ಆದ ಹಿನ್ನೆಲೆಯಲ್ಲಿ ಹೋಟೆಲ್, ಬೀದಿ ಬದಿ ಚಹಾ ಅಂಗಡಿ ಮುಚ್ಚಿದ ಪರಿಣಾಮ ನಿತ್ಯ 30 ಸಾವಿರ ಲೀಟರ್ ಹಾಲು ಉಳಿಯುತ್ತಿದೆ. ಇದು ನಷ್ಡಕ್ಕೆ ಕಾರಣವಾಗಿದೆ.
ಕೆಎಂಎಫ್ ಕರ್ನಾಟಕ ಅಲ್ಲದೇ ಮಹಾರಾಷ್ಟ್ರಕ್ಕೂ ಹೆಚ್ಚಿನ ಹಾಲು ಹಾಗೂ ಅದರ ಇತರೆ ಉತ್ಪಾದನೆ ಮಾರಾಟ ಮಾಡುತ್ತಿದೆ. ಈಗ ಮಹಾರಾಷ್ಟ್ರ ಸಂಪೂರ್ಣ ಲಾಕ್‌ಡೌನ್ ಆಗಿರುವ ಕಾರಣ ಅಲ್ಲಿನ ಎರಡು ಪ್ರಮುಖ ಹಾಲಿನ ಡೈರಿ ಬಂದ್ ಆಗಿವೆ. ಆ ಡೈರಿಗಳಿಗೆ ರೈತರು ಹಾಕುತ್ತಿದ್ದ ಹಾಲು ಈಗ ಕರ್ನಾಟಕದ ಕೆಎಂಎಫ್‌ನತ್ತ ಮುಖ ಮಾಡಿದ್ದಾರೆ. ಅವರ ಹಾಲನ್ನು ಸಹ ಕೆಎಂಎಫ್ ಖರೀದಿಸಿ ಸರ್ಕಾರದ ನಿರ್ದೇಶನದಂತೆ ಕೊಳಗೇರಿ ನಿವಾಸಿಗಳಿಗೆ ಉಚಿತ ಹಂಚಿಕೆ ಮಾಡುವ ಕೆಲಸ ಮಾಡುತ್ತಿದೆ.
ಉಚಿತ ಹಾಲು ಹಂಚಿಕೆ, ನಷ್ಟದಲ್ಲಿದ್ದರೂ ಮಹಾರಾಷ್ಟ್ರ ರೈತರ ಹಾಲು ಖರೀದಿ ಹಿಂದೆ ಕೆಎಂಎಫ್ ಲೆಕ್ಕಾಚಾರವೇ ಬೇರೆಯಾಗಿದೆ. ನಿತ್ಯ ಕರ್ನಾಟಕದಿಂದಲೇ 1.76 ಲಕ್ಷ ಹಾಲು ಸಂಗ್ರಹಿಸುತ್ತಿರುವ ಕೆಎಂಎಫ್ ಮುಂದಿನ ದಿನದಲ್ಲಿ ಮಹಾರಾಷ್ಟ್ರದ ಹಾಲು ಮಾರಾಟ ಮಾಡುವ ರೈತರನ್ನು ತನ್ನತ್ತ ಸೆಳೆದು ಹಾಲು ಉತ್ಪಾದನೆ ಮಾರುಕಟ್ಟೆ ಮತ್ತಷ್ಟು ವಿಸ್ತರಿಸುವ ಮುಂದಾಲೋಚನೆ ಮಾಡಿದೆ.