ವಿಜಯಪುರ: ರಾಜ್ಯ ವಿದ್ಯುತ್ ಪ್ರಸರಣ ಕಂಪನಿ ನಿಗಮದ ಸಿಬ್ಬಂದಿ ನಿರ್ಲಕ್ಷ್ಯದಿಂದ ವ್ಯಕ್ತಿಯೊಬ್ಬ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ತೀವ್ರ ಗಾಯಗೊಂಡಿರುವ ಆರೋಪ ಪ್ರಕರಣ ಜಿಲ್ಲೆಯ ತಾಳಿಕೋಟೆ ತಾಲೂಕಿನ ಜಿಂಜಲಭಾವಿ ಗ್ರಾಮದಲ್ಲಿ ನಡೆದಿದೆ. ದುಡಿದು ಕುಟುಂಬ ಸಾಕುತ್ತಿದ್ದ ವ್ಯಕ್ತಿ ಆಸ್ಪತ್ರೆ ಸೇರಿದ ಹಿನ್ನೆಲೆ ಕುಟುಂಬಸ್ಥರು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದ್ದು, ಚಿಕಿತ್ಸೆಗೂ ಹಣವಿಲ್ಲದೇ ಪರದಾಡುತ್ತಿದ್ದಾರೆ.
27ವರ್ಷದ ಕೂಲಿ ಕಾರ್ಮಿಕ ಮಲ್ಲೇಶ ಹೊನ್ನಳ್ಳಿ, ಕಳೆದ ದಿನ ಬರ್ಹಿದೆಸೆಗೆ ಹೋಗಿ ಬರುವಾಗ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದಿದ್ದಾನೆ. ತಕ್ಷಣ ಬೆಂಕಿ ಹೊತ್ತಿಕೊಂಡು ಕಾಲುಗಳನ್ನು ಆವರಿಸಿತ್ತು. ಘಟನೆಯಿಂದ ಎರಡೂ ಕಾಲು, ಹೊಟ್ಟೆ ಭಾಗ, ಬಲಗೈ ಸಂಪೂರ್ಣ ಸುಟ್ಟು ಹೋಗಿದೆ. ಸದ್ಯ ಮಲ್ಲೇಶ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಕೆಇಬಿ ನಿರ್ಲಕ್ಷ್ಯ ಆರೋಪ: ಮಲ್ಲೇಶ ಮನೆಗೆ ಕೆಇಬಿಯವರು ನೀಡಿದ್ದ ವಿದ್ಯುತ್ ಸಂಪರ್ಕ ತಂತಿ ಪದೇ ಪದೇ ಕಟ್ಟಾಗಿ ಬೀಳುತ್ತಿತ್ತು. ಈ ಬಗ್ಗೆ ಸಾಕಷ್ಟು ಬಾರಿ ಕೆಇಬಿಯವರಿಗೆ ಹೇಳಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಕುಟುಂಬಸ್ಥರು. ವಿದ್ಯುತ್ ತಂತಿ ಕಟ್ಟಾಗಿ ಬಿದ್ದಿದ್ದನ್ನು ಗಮನಿಸದ ಹಿನ್ನೆಲೆ ಈ ಅವಘಡ ಸಂಭವಿಸಿದೆ. ಕುಟುಂಬದ ಆಧಾರ ಸ್ತಂಭದಂತಿದ್ದ ಮಗನ ಸ್ಥಿತಿಯನ್ನು ನೋಡಿ ಪೋಷಕರು ಕಂಗಾಲಾಗಿದ್ದು, ತಕ್ಷಣವೇ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.