ವಿಜಯಪುರ: ರಾಜ್ಯದಲ್ಲಿ ಕೊರೊನಾ ವೈರಸ್ ಆರ್ಭಟ ಜೋರಾಗಿರುವುದರ ಮಧ್ಯೆ ವಿಜಯಪುರ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪರೀಕ್ಷಾ ದಿನಾಂಕ ಪ್ರಕಟಗೊಂಡಿವೆ.
ಸೆ.6 ರಿಂದ 16ರವರೆಗೆ ಪದವಿ ಪರೀಕ್ಷೆ ನಡೆಯಲಿದ್ದು, ಸೆ.14ರಿಂದ 20ರವರೆಗೆ ಸ್ನಾತಕೋತ್ತರ ಪರೀಕ್ಷೆ ಆಯೋಜಿಸಲಾಗಿದೆ. ಸರ್ಕಾರದ ಮಾರ್ಗ ಸೂಚಿಯನ್ವಯ ಪರೀಕ್ಷೆ ನಡೆಸಲು ಮಹಿಳಾ ವಿವಿ ಮೌಲ್ಯಮಾಪನ ಕುಲ ಸಚಿವರು ನಿರ್ಧರಿಸಿದ್ದಾರೆ.
ಈಗಾಗಲೇ ಪರೀಕ್ಷೆ ನಡೆಯುವ ಕಾಲೇಜು, ಸ್ನಾತಕೋತ್ತರ ವಿಭಾಗ, ಸ್ನಾತಕೋತ್ತರ ಕೇಂದ್ರದ ಆವರಣ, ವಸತಿ ಗೃಹಗಳನ್ನು ಸ್ಯಾನಿಟೈಸ್ ಮಾಡಿರುವ ವಿವಿ ಸಿಬ್ಬಂದಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಪರೀಕ್ಷೆ ಸಮಯದಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದರೆ ಪ್ರತ್ಯೇಕ ರೂಂನಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲು ನಿರ್ಧರಿಸಲಾಗಿದೆ.
ಬೇರೆ ರಾಜ್ಯಗಳ ವಿದ್ಯಾರ್ಥಿನಿಯರೂ ಪರೀಕ್ಷೆಗೆ ಮುನ್ನ ಆಗಮಿಸಿ ಸಾಂಸ್ಥಿಕ ಹೋಂ ಕ್ವಾರಂಟೈನ್ ಮುಗಿಸಿಕೊಳ್ಳಲು ಸೂಚನೆ ನೀಡಲಾಗಿದೆ. ಪ್ರತಿ ವಿದ್ಯಾರ್ಥಿನಿ, ಪರೀಕ್ಷಾ ಸಿಬ್ಬಂದಿ, ಆರೋಗ್ಯ ಸೇತು ಆ್ಯಪ್ ಅಳವಡಿಕೆ ಕಡ್ಡಾಯ ಮಾಡಲಾಗಿದೆ. ವಿದ್ಯಾರ್ಥಿನಿಯರ ಅನುಕೂಲಕ್ಕಾಗಿ ಈಗಾಗಲೇ ಕೆಎಸ್ಆರ್ಟಿಸಿ ಸೇರಿ ಎಲ್ಲ ರೀತಿಯ ಬಸ್ ಡಿಪೋಗಳ ಮುಖ್ಯಸ್ಥರಿಗೆ ಸಾರಿಗೆ ವ್ಯವಸ್ಥೆಗೆ ಮುಖ್ಯಸ್ಥರಿಗೆ ಪತ್ರ ಬರೆಯಲಾಗಿದೆ.
ಜೂಮ್ ಆ್ಯಪ್ ಮೂಲಕ ಎಲ್ಲ ಕಾಲೇಜುಗಳ ಪ್ರಾಂಶುಪಾಲರ ಜೊತೆ ಸಭೆ ಕೂಡ ಮಾಡಲಾಗಿದೆ ಎಂದು ವಿಜಯಪುರ ಅಕ್ಕ ಮಹಾದೇವಿ ವಿಶ್ವವಿದ್ಯಾಲಯ ಮೌಲ್ಯಮಾಪನಾ ಕುಲ ಸಚಿವ ಪ್ರೊ. ಪಿ. ಜಿ. ತಡಸದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.