ವಿಜಯಪುರ: ಮಹಾಮಾರಿ ಕೊರೊನಾ ವೈರಸ್ ಜನರ ಬದುಕಿನ ಬುಡವನ್ನೇ ಅಲ್ಲಾಡಿಸಿದೆ. ಇಡೀ ದೇಶ ಲಾಕ್ ಡೌನ್ ಆದ ಹಿನ್ನೆಲೆ ರಾಜ್ಯದಿಂದ ಗೋವಾಕ್ಕೆ ಗುಳೆ ಹೋಗಿದ್ದ ಜನರಿಗೆ ಒಂದು ತುತ್ತು ಅನ್ನಕ್ಕೂ ಗತಿ ಇಲ್ಲದಂತಾಗಿದೆ.
ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಘಾಳಪೂಜಿ, ಕಾನಿಕೇರಿ, ಲೊಟಗೇರಿ, ಬಿಜ್ಜೂರ ಹಾಗೂ ಸುರಪೂರ ತಾಲೂಕಿನ ಕೊಡೆಕಲ್ ಗ್ರಾಮದ ನಿವಾಸಿಗಳು ಈಗ ಗೋವಾದಲ್ಲಿ ಅತಂತ್ರರಾಗಿದ್ದಾರೆ. ಗೋವಾದ ಮಾಪ್ಸಾ ಜಿಲ್ಲೆಯ ಅಂಜನಾ ಬೀಚ್ ಬಳಿ ಗುಡಿಸಲು ಹಾಕಿಕೊಂಡು ವಾಸಿಸುತ್ತಿದ್ದಾರೆ.
ನಿತ್ಯ ದುಡಿದು ಊಟ ಮಾಡುವ ಜನರಿಗೆ ಮಹಾಮಾರಿ ಕೊರೊನಾ ಜೀವಕ್ಕೆ ಕುತ್ತು ತಂದಿದೆ. ಕಳೆದ ಒಂದು ವಾರದಿಂದ ಕೆಲಸವಿಲ್ಲ, ಕೈಯಲ್ಲಿ ಕಾಸಿಲ್ಲ. ಹೊರಗಡೆ ಹೋಗಿ ಭಿಕ್ಷೆ ಬೇಡಲು ಸಹ ಆಗುತ್ತಿಲ್ಲ. ಗೋವಾ ಸರ್ಕಾರ ಲಾಕ್ ಡೌನ್ ಘೋಷಿಸಿದ ಹಿನ್ನೆಲೆ ಈ ಪರಿಸ್ಥಿತಿ ನಿರ್ಮಾಣವಾಗಿದೆ.
ಇತ್ತ ಗುಳೆ ಹೋದವರು ಮರಳಿ ಊರಿಗೆ ಬರಬೇಕೆಂದರೆ ಯಾವುದೇ ಸಾರಿಗೆ ಸಂಚಾರ ಇಲ್ಲದಿರುವುದು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಗೋವಾ ಸರ್ಕಾರಕ್ಕೆ ಮನವಿ ಮಾಡಿದ್ದರೂ ಸಹ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ. ಈಗಲಾದರೂ ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮತ್ತ ಗಮನಹರಿಸಿ ರಾಜ್ಯಕ್ಕೆ ಕರೆಸಿಕೊಳ್ಳುವ ವ್ಯವಸ್ಥೆ ಮಾಡಲಿ ಎಂದು ಅಂಗಲಾಚಿದ್ದಾರೆ.