ವಿಜಯಪುರ: ಮರಾಠಿ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ ವಿಜಯಪುರ ಜಿಲ್ಲೆಯಲ್ಲಿ ಬಹುತೇಕ ವಿಫಲಗೊಂಡಿದೆ.
ಕೆಲವು ಕಡೆ ಕನ್ನಡ ಸಂಘಟನೆಗಳು ಪ್ರತಿಭಟನೆ ನಡೆಸಿದರೆ, ಎಂದಿನಂತೆ ವ್ಯಾಪಾರ ವಹಿವಾಟಗಳು ನಡೆದಿದ್ದವು. ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹಾಕಿದ್ದ ಸವಾಲು ಹಾಗೂ ಕನ್ನಡ ಪರ ಸಂಘಟನೆಗಳು ನೀಡಿದ್ದ ಮರು ಸವಾಲು ಹೆಚ್ಚು ಸದ್ದು ಮಾಡಿತು.
ಬೆಳಗ್ಗೆ ಎಂದಿನಂತೆ ವ್ಯಾಪಾರ ವಹಿವಾಟು, ಬಸ್ ಸಂಚಾರ ಇದ್ದ ಕಾರಣ ಕರ್ನಾಟಕ ಬಂದ್ ಇದೆ ಎನ್ನುವದು ಗೊತ್ತಾಗಲಿಲ್ಲ. ಶಾಸಕ ಯತ್ನಾಳ್ ಬೆಂಬಲಿಗರು ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದರೆ ಮಾಲೀಕರಿಗೆ ತಿಳುವಳಿಕೆ ಹೇಳಲು ಸಿದ್ದೇಶ್ವರ ದೇವಸ್ತಾನದ ಬಳಿ ಜಮಾಯಿಸಿದ್ದರು. ಆದರೆ ಎಂದಿನಂತೆ ವ್ಯಾಪಾರ ಇರುವ ಕಾರಣ ಅವರು ಸಹ ದೇವಸ್ಥಾನ ಬಳಿ ಯತ್ನಾಳ್ ಪರ ಘೋಷಣೆ ಕೂಗಿ ಕನ್ನಡ ಪರ ಸಂಘಟನೆಗಳ ವಿರುದ್ಧ ಹರಿಹಾಯ್ದರು.
ಇತ್ತ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಕಾರ್ಯಕರ್ತರು ನಗರದ ಅಂಬೇಡ್ಕರ್ ವೃತ್ತದ ಬಳಿ ಪ್ರತಿಭಟನೆ ನಡೆಸಿದರು. ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಮಾತನಾಡಿದ ಕರವೇ ರಾಜ್ಯ ಉಪಾಧ್ಯಕ್ಷ ಎಚ್.ಎಂ. ಸೊಂಪುರ, ಯತ್ನಾಳ್ ವಿರುದ್ಧ ನಾಲಿಗೆ ಹರಿ ಬಿಟ್ಟಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ಕರ್ನಾಟಕ ಬಂದ್, ಮರಾಠಿ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಕ್ಕಿಂತ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿಕೆ ವಿರುದ್ಧವೆ ಕರವೇ ಪ್ರತಿಭಟನೆ ನಡೆಸುವಂತಾಯಿತು. ಇತ್ತ ಯತ್ನಾಳ್ ಬೆಂಬಲಿಗರು ತಮ್ಮ ಶಾಸಕರ ಪರ ನಿಂತು ಸ್ವಾಮಿ ನಿಷ್ಠೆ ಪ್ರದರ್ಶಿಸಿದ್ದಾರೆ.