ವಿಜಯಪುರ : ನಗರದಲ್ಲಿ ಕೋವಿಡ್ ಭೀತಿಯ ನಡುವೆಯೂ ಜನರು ತಮ್ಮ ಮನೆಗಳಲ್ಲಿ ನಾಗರ ಪಂಚಮಿ, ಶ್ರಾವಣ ಮೊದಲ ಶುಕ್ರವಾರದ ಲಕ್ಷ್ಮೀ ಪೂಜೆಗಳನ್ನು ಸರಳವಾಗಿ ಆಚರಣೆ ಮಾಡಿದ್ದಾರೆ.
ವಿವಿಧ ಬಗೆಯ ಲಾಡು, ಹೋಳಿಗೆ ಸೇರಿದಂತೆ ವಿವಿಧ ಖಾದ್ಯಗಳನ್ನ ತಯಾರಿಸಿ, ಬಗೆ ಬಗೆಯ ಹೂವುಗಳಿಂದ ಲಕ್ಷ್ಮೀ ದೇವಿಯನ್ನು ಸರಳವಾಗಿ ಪೂಜಿಸಿದ್ದಾರೆ.
ಕೊರೊನಾ ಭೀತಿಯಿಂದ ಜನತೆ ನಾಗರ ಪಂಚಮಿ ಹಬ್ಬಕ್ಕೆ ಸಂಬಂಧಿಕರನ್ನ ಹೆಚ್ಚಾಗಿ ಕರೆಸುತ್ತಿಲ್ಲ. ಕುಟುಂಬಸ್ಥರೇ ಸೇರಿಕೊಂಡು ಮನೆಯಲ್ಲಿ ನಾಗಪ್ಪನಿಗೆ ಹಾಲು ಎರೆದು ಸಾಂಪ್ರದಾಯಿಕವಾಗಿ ಹಬ್ಬ ಆಚರಣೆ ಮಾಡುತ್ತಿದ್ದಾರೆ. ನಾಳೆ ಬೆಳಗ್ಗೆ ಸಾರ್ವಜನಿಕರು ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ನಾಗ ಮೂರ್ತಿಗೆ ಹಾಲೆರೆದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ.
ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ನಾಗರ ಪಂಚಮಿಯನ್ನು ತಮ್ಮ ಮನೆಯಲ್ಲಿ ಆಚರಣೆ ಮಾಡಿ. ಸಾರ್ವಜನಿಕ ಸ್ಥಳಗಳಲ್ಲಿ ಗುಂಪಾಗಿ ಸೇರಿಕೊಂಡು ಹಬ್ಬ ಆಚರಣೆ ಮಾಡಬೇಡಿ ಎಂದು ಜನರಿಗೆ ಮನವಿ ಮಾಡಿಕೊಂಡಿದ್ದಾರೆ.