ವಿಜಯಪುರ: ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ವಿಜಯಪುರ ಜಿಲ್ಲಾ ಜೆಡಿಎಸ್ ಮಾಜಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸೇರಿ 6 ಜನರನ್ನು ಉಚ್ಚಾಟನೆ ಮಾಡಲಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಬಸನಗೌಡ ಮಾಗಡಿ ಹೇಳಿದ್ದಾರೆ. ನಗರದಲ್ಲಿ ಬುಧವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸ್ನೇಹಲತಾ ಶೆಟ್ಟಿ, ಮುಖಂಡರಾದ ಯಾಕೂಬ್ ಕೂಪರ್, ಅಕ್ಬರ್ ಮುಲ್ಲಾ, ದಸ್ತಗಿರಿ ಸಾಲೋಟಗಿ, ಸಂಶುದ್ದಿನ್ ಮುಲ್ಲಾ, ಯೂಥ್ ಘಟಕದ ಜಿಲ್ಲಾಧ್ಯಕ್ಷ ಸಿದ್ಧನಗೌಡ ಪಾಟೀಲ್ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಇನ್ನು ಪಕ್ಷದ ವಿರುದ್ಧ ಚಟುವಟಿಕೆ ಸಹಿಸಲ್ಲ. ಜೆಡಿಎಸ್ ಜಿಲ್ಲಾಧ್ಯಕ್ಷರಾಗಿ ತಾವು ಕಳೆದ ಒಂದು ವರ್ಷದಿಂದ ಕೆಲಸ ಮಾಡುತ್ತಿದ್ದೇನೆ. ತಾವು ಕಚೇರಿಗೆ ಬರಲ್ಲ ಎಂದು ಅಪಪ್ರಚಾರ ಮಾಡಲಾಗಿದೆ. ಸದಾ ಕಚೇರಿಯಲ್ಲಿ ಕುಳಿತಿರುವುದಕ್ಕೆ ತಾವೇನು ಕ್ಲರ್ಕಾ..? ಎಂದು ವಿರೋಧಿಗಳನ್ನು ಪ್ರಶ್ನಿಸಿದರು.
ಪಕ್ಷದ ಹೈಕಮಾಂಡ್ ಈಗಾಗಲೇ 8 ಕ್ಷೇತ್ರಗಳ ಪೈಕಿ 7 ಕ್ಷೇತ್ರದ ಅಭ್ಯರ್ಥಿಗಳನ್ನು ಮುಂದಿನ ಚುನಾವಣೆ ಅಭ್ಯರ್ಥಿಗಳಾಗಿ ಆಯ್ಕೆ ಮಾಡಿದ್ದಾರೆ. ಅವರ ಕ್ಷೇತ್ರಕ್ಕೆ ಹೋಗಿ ಪಕ್ಷ ಸಂಘಟನೆ ಮಾಡುತ್ತಿದ್ದೇನೆ. ನಿತ್ಯ ಎರಡು ಕ್ಷೇತ್ರದಲ್ಲಿ ಪಕ್ಷದ ಸಭೆ ನಡೆಸಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಾಗುತ್ತಿದೆ. ಹೀಗಿರುವಾಗ ಅನಾವಶ್ಯಕವಾಗಿ ತಮ್ಮ ಮೇಲೆ ಅಪಪ್ರಚಾರ ನಡೆಸಲಾಗುತ್ತಿದೆ. ಈ ಬಗ್ಗೆ ಹೈಕಮಾಂಡ್ಗೆ ಮಾಹಿತಿ ನೀಡಿ 6 ಜನ ಮುಖಂಡರನ್ನು 6 ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದೆ ಎಂದರು.
ನಗರಕ್ಕೆ ಖಾಜಿ: ವಿಜಯಪುರ ನಗರ ಕ್ಷೇತ್ರಕ್ಕೆ ಜೆಡಿಎಸ್ ಕಾರ್ಯಾಧ್ಯಕ್ಷ ಬಿಲ್ ವಾರ್ ಖಾಜಿ ಆಕಾಂಕ್ಷಿಯಾಗಿದ್ದು, ಅವರ ಹೆಸರನ್ನು ಪಕ್ಷದ ವರಿಷ್ಠರಿಗೆ ಕಳುಹಿಸಿಕೊಡಲಾಗಿದೆ. ಕಳೆದ 20 ವರ್ಷಗಳಿಂದ ಅವರು ಪಕ್ಷಕ್ಕಾಗಿ ದುಡಿದಿದ್ದಾರೆ. ಹೀಗಾಗಿ ಅವರ ಹೆಸರು ಶಿಫಾರಸು ಮಾಡಲಾಗಿದ್ದು, ವರಿಷ್ಠರು ಅಂತಿಮ ಅಭ್ಯರ್ಥಿ ಯಾರನ್ನು ಮಾಡಿದರೂ ಅವರ ಗೆಲುವಿಗೆ ಪಕ್ಷದ ಮುಖಂಡರು, ಕಾರ್ಯಕರ್ತರು ದುಡಿಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಜಾಧ್ವನಿ ಮೂಲಕ ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರ ವಾಗ್ದಾಳಿ (ಚಿಕ್ಕೋಡಿ): ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವುದರಿಂದ ಕಾಂಗ್ರೆಸ್ ಪಕ್ಷ ಆಡಳಿತರೂಢ ಸರ್ಕಾರದ ವೈಫಲ್ಯಗಳನ್ನು ಇಟ್ಟುಕೊಂಡು ಪ್ರಜಾಧ್ವನಿ ಬಸ್ ಯಾತ್ರೆಯನ್ನು ರಾಜ್ಯಾದ್ಯಂತ ಇವತ್ತಿನಿಂದ ಚಿಕ್ಕೋಡಿಯಿಂದ ಪ್ರಾರಂಭ ಮಾಡಿದೆ. ಇಂದು ಚಿಕ್ಕೋಡಿ ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ನಾಯಕರನ್ನು ಅದ್ಧೂರಿಯಾಗಿ ಸ್ವಾಗತ ಮಾಡಿಕೊಂಡಿದ್ದಾರೆ. ನಂತರ ಗಿಡಕ್ಕೆ ನೀರು ಹಾಕುವ ಮೂಲಕ ಪ್ರಜಾಧ್ವನಿ ಸಮಾವೇಶಕ್ಕೆ ಚಾಲನೆ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿದ್ದು, ಬೇರೆ ಬೇರೆ ಪಕ್ಷದ ಶಾಸಕರನ್ನು ಖರೀದಿ ಮಾಡಿ ಬಿಜೆಪಿ ಸರ್ಕಾರ ರಚನೆ ಮಾಡಿದರು. ಈ ಸರ್ಕಾರಕ್ಕೆ ಯಾವುದೇ ನೈತಿಕತೆ ಇಲ್ಲ. ಬಿಜೆಪಿ ಸರ್ಕಾರ 600 ಭರವಸೆಗಳನ್ನು ಕೊಟ್ಟಿದ್ರು. ಶೇ10ರಷ್ಟು ಅಂದ್ರೆ 60 ಭರವಸೆಗಳನ್ನು ಸಹ ಈಡೇರಿಸಲು ಅವರಿಂದ ಆಗಿಲ್ಲ. ಇನ್ನು ಸಹ 540 ಭರವಸೆಗಳು ಹಾಗೆಯೇ ಉಳಿದಿವೆ ಎಂದು ಹೇಳಿದ್ದಾರೆ. ನಾವು ಅಧಿಕಾರಕ್ಕೆ ಬಂದ್ರೆ ಸೊಸೈಟಿ ಸಾಲ, ಪ್ರಾಥಮಿಕ ಪತ್ತಿನ ಒಂದು ಲಕ್ಷದವರೆಗಿನ ಸಾಲ ಮನ್ನಾ ಮಾಡ್ತಿವಿ ಎಂದು ಹೇಳಿದ್ದೇವಿ ಎಂದಿದ್ದಾರೆ.
ಒಂದೇ ಒಂದು ರೂಪಾಯಿ ಮನ್ನಾ ಮಾಡಲು ನರೇಂದ್ರ ಮೋದಿಯಿಂದ, ಬಸವರಾಜ ಬೊಮ್ಮಾಯಿಯಿಂದ ಸಾಧ್ಯವಾಗಿಲ್ಲ. ರೈತರ ಸಾಲ ಮನ್ನಾ ಮಾಡಲು ಆಗಿಲ್ಲ. 2,22,700 ರೈತರ ಕುಟುಂಬಗಳಿಗೆ 8,160 ಕೋಟಿ ರೂಗಳ ಸಾಲವನ್ನು ಮನ್ನಾ ಮಾಡಿದ್ದು ಕಾಂಗ್ರೆಸ್ ಸರ್ಕಾರ ಎಂದು ಹೇಳಿದರು.
ಬಿಜೆಪಿ ವಿರುದ್ಧ ವಾಗ್ದಾಳಿ.. ನರೇಂದ್ರ ಮೋದಿ ಹೇಳಿದ್ರು ರೈತರ ಆದಾಯವನ್ನು ದುಪ್ಪಟ್ಟು ಮಾಡ್ತೇವೆ ಎಂದು, 2012-13 ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ರೈತನ ಆದಾಯ 48,000ರೂ ಇತ್ತು. ನಾವು ಅಧಿಕಾರ ಬಿಡುವಾಗ 1,13,000 ರೂ ಇತ್ತು. ರೈತರ ಆದಾಯವನ್ನು ದುಪ್ಪಟ್ಟು ಮಾಡಿದ್ದು ನಾವು. ಬೆಳಗಾವಿ ಜಿಲ್ಲೆಯ ರೈತರು ಸಂಕಷ್ಟದಲ್ಲಿದ್ದಾರೆ.
ಇಲ್ಲಿ ನೀರಾವರಿ ಪ್ರದೇಶ ಜಾಸ್ತಿ ಇದೆ. ಕಬ್ಬಿಗೆ ಬೆಂಬಲ ಬೆಲೆ ನೀಡಿ ಅಂದ್ರೆ ಅದು ಸಾಧ್ಯವಾಗಿಲ್ಲ. ಕಬ್ಬಿಗೆ ಬೆಲೆ ಕೊಡಲು ಸಾದ್ಯವಿಲ್ಲ ಅಂದ್ರೆ ರೈತರ ಆದಾಯವನ್ನು ದುಪ್ಪಟ್ಟು ಮಾಡಲಿ. ಸಾಧ್ಯವಾಗುತ್ತಾ..? ಬಿಜೆಪಿ ಅಂದ್ರೆ ಸುಳ್ಳಿನ ಫ್ಯಾಕ್ಟರಿ. ರೈತರಿಗೆ ಮೋಸ, ಮಹಿಳೆಯರಿಗೆ ಮೋಸ, ಹಿಂದುಳಿದ ವರ್ಗದವರಿಗೆ ಮೋಸ, ಯುವಕರಿಗೆ ಮೋಸ ಮಾಡುತ್ತಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಓದಿ: ಬಿಜೆಪಿ ಸರ್ಕಾರ ಜನರಿಗೆ ಮಕ್ಮಲ್ ಟೋಪಿ ಹಾಕಿದೆ.. ಪ್ರಜಾಧ್ವನಿ ಮೂಲಕ ಕಾಂಗ್ರೆಸ್ ನಾಯಕರ ವಾಗ್ದಾಳಿ