ವಿಜಯಪುರ: ಕೃಷ್ಣಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಕಾಲುವೆಗಳಿಗೆ ವಾರಾಬಂದಿ ಪದ್ಧತಿಗೆ ಒಳಪಟ್ಟು 2021ರ ಮಾರ್ಚ್ 21 ರವರೆಗೆ ನೀರು ಹರಿಸಲು ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅಧ್ಯಕ್ಷತೆಯಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯ ನಂತರ ಮಾತನಾಡಿದ ಡಿಸಿಎಂ, ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯಕ್ಕೆ ಪ್ರತ್ಯೇಕ ವಾರಾಬಂದಿ ನಿಗದಿ ಮಾಡಿದ್ದು, ನಾರಾಯಣಪುರ ಜಲಾಶಯ ವ್ಯಾಪ್ತಿಯ ಕಾಲುವೆಗಳಿಗೆ 14 ದಿನ ಚಾಲು, 8 ದಿನ ಬಂದ್, ಆಲಮಟ್ಟಿ ಜಲಾಶಯ ವ್ಯಾಪ್ತಿಯ ಕಾಲುವೆಗಳಿಗೆ 8 ದಿನ ಚಾಲು 7 ದಿನ ಬಂದ್ ವಾರಾಬಂದಿ ಷರತ್ತಿಗೆ ಒಳಪಟ್ಟು ನೀರು ಹರಿಸಬೇಕು ಎಂದು ಸಭೆ ತೀರ್ಮಾನಿಸಿದೆ ಎಂದರು.
ಡಿಸೆಂಬರ್ 1 ರಿಂದ ಈ ಹಿಂಗಾರು ಹಂಗಾಮಿಗೆ ನೀರು ಹರಿಸುವಿಕೆ ಆರಂಭಗೊಳ್ಳಲಿದೆ. ಅಣೆಕಟ್ಟು ವಲಯದ ಪ್ರಸಕ್ತ ಸಾಲಿನ 1000 ಕೋಟಿ ರೂ. ಗಳ ಕ್ರಿಯಾ ಯೋಜನೆ ಕೋವಿಡ್ ಕಾರಣದಿಂದ ತಡವಾಗಿದೆ. ಈ ಬಗ್ಗೆ ಸಿಎಂ ಜತೆ ಚರ್ಚಿಸಿ ಹಣಕಾಸು ಇಲಾಖೆಯಿಂದ ಅನುಮೋದನೆ ಕೊಡಿಸಲಾಗುವುದು ಎಂದು ತಿಳಿಸಿದರು.
ನೀರು ಬಳಕೆದಾರರ ಸಂಘ ಪುನಶ್ಚೇತನಗೊಳಿಸಿ, ಅವುಗಳಿಗೆ ಕಾಲುವೆ ಹಾಗೂ ವಾರಾಬಂದಿ ನಿರ್ವಹಣೆ ಜವಾಬ್ದಾರಿ ನೀಡಲಾಗುವುದು. ಮುಳುಗಡೆ ಸಂತ್ರಸ್ತರ ಕುಟುಂಬಕ್ಕೆ ನೀಡಲಾಗುತ್ತಿದ್ದ ಶೇ. 5 ಒಳಮೀಸಲಾತಿ ಮುಂದುವರೆಸಲು ಸಿಎಂ ಜತೆ ಚರ್ಚಿಸಿ ಶೀಘ್ರವೇ ಮೀಸಲಾತಿ ಮುಂದುವರೆಸಲಾಗುವುದು ಎಂದು ಭರವಸೆ ನೀಡಿದರು.