ವಿಜಯಪುರ: ಜಿಲ್ಲೆಯಲ್ಲಿ ಮಹಿಳೆಯರ ಸರಗಳ್ಳತನ ಪ್ರಕರಣಗಳ ಸಂಬಂಧ ಇಷ್ಟೂ ದಿನ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಎಸ್ಕೇಪ್ ಆಗುತ್ತಿದ್ದ, ಖತರ್ನಾಕ್ ಇರಾನಿ ಟೀಮ್ ಅನ್ನು ಗೋಲ್ ಗುಮ್ಮಜ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೀದರ್ ಮೂಲದ ಗುಲಾಮ್ ಅಲಿ ಪರಿದ್ದೀನ್ ಜಾಫರಿ ಮಹಮ್ಮದ, ಸೋಲ್ಲಾಪುರದ ಮಹಮದ್ ಇರ್ಪಾನ್ ಇರಾಣಿ, ಮಹಮ್ಮದ್ ಇನಾಯತ್ ಇರಾಣಿ ಹಾಗೂ ಸತಾರದ ನಿಸಾರ್ ಅಲಿಯಾಸ್ ಪಟ್ಟು ಚೀನಿ ಬಾಬಾ ಬಂಧಿತ ಆರೋಪಿಗಳು. ಬುಧವಾರ ತಡರಾತ್ರಿ ನಗರದ ಸೊಲ್ಲಾಪುರದ ನಾಕಾ ಹತ್ತಿರ ಗೋಲ್ ಗುಮ್ಮಜ್ ಪೊಲೀಸ್ ತಂಡ ವಾಹನ ತಪಾಸಣೆ ಮಾಡುತ್ತಿದ್ದರು. ಈ ವೇಳೆ ಮಹಾರಾಷ್ಟ್ರದಿಂದ ಅನುಮಾನಾಸ್ಪದವಾಗಿ ಬಂದ ಎರಡು ಬೈಕ್ಗಳು ಪೊಲೀಸರ ಕಣ್ಣಿಗೆ ಬಿದ್ದಿವೆ. ಈ ವೇಳೆ ವಿಚಾರಣೆ ನಡೆಸಿದಾಗ ಈ ಖದೀಮರ ಬಳಿ ಚಿನ್ನದ ಸರಗಳು ಪತ್ತೆಯಾಗಿವೆ. ಇನ್ನು ತಮ್ಮದೇ ಸ್ಟೈಲ್ನಲ್ಲಿ ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ, ಸರಗಳ್ಳರಾದ ಇರಾನಿ ಗ್ಯಾಂಗ್‌ನವರು ಎಂದು ಒಪ್ಪಿಕೊಂಡಿದ್ದಾರೆ. ಇವರು ಅಂತರಾಜ್ಯದಲ್ಲೂ ಚಿನ್ನ ದೋಚಿ ಪರಾರಿಯಾಗುತ್ತಿರುವುದು ಬೆಳಕಿಗೆ ಬಂದಿದೆ.
ಬಂಧಿತ ಆರೋಪಿಗಳಿಂದ 150 ಗ್ರಾಂ ಚಿನ್ನ ಹಾಗೂ ಕೃತ್ಯಕ್ಕೆ ಬಳಸಲಾಗುತ್ತಿದ್ದ 2 ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ದೋಚಿದ ಚಿನ್ನ ಮಾರಾಟ ಮಾಡಲು ಧಾರವಾಡಕ್ಕೆ ತೆರಳುತ್ತಿದ್ದರು ಎಂಬ ಮಾಹಿತಿಯನ್ನ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೂ ಇವರ ಮೂಲ ಸರಿಯಾಗಿ ತಿಳಿದು ಬಂದಿಲ್ಲ. ವಿಚಾರಣೆ ಬಳಿಕ ತಿಳಿದು ಬರಲಿದೆ ಎಂದು ಎಸ್ಪಿ ಅನುಪಮ್ ಹೇಳಿದ್ದಾರೆ.