ಮುದ್ದೇಬಿಹಾಳ: ತಾಳಿಕೋಟೆ ತಾಲೂಕಿನ ಪೀರಾಪೂರ ಬಹುಹಳ್ಳಿ ಕುಡಿಯುವ ನೀರಿನ ಯೋಜನೆಯು ಮುಕ್ತಾಯಗೊಂಡು ವರ್ಷ ಕಳೆದಿದೆ. ಆದರೆ ಈಗಾಗಲೇ ಈ ಯೋಜನೆಯಿಂದ 14 ಗ್ರಾಮಗಳಿಗೆ ಪೂರೈಕೆ ಮಾಡಲಾಗುತ್ತಿರುವ ಕುಡಿಯುವ ನೀರು ಕೊಳಚೆ ಮಟ್ಟದಿಂದ ಪೂರೈಕೆಯಾಗುತ್ತಿದ್ದು, ಕೂಡಲೇ ಶುದ್ದ ಕುಡಿಯುವ ನೀರು ಒದಗಿಸಲು ಕ್ರಮ ವಹಿಸಬೇಕೆಂದು ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ತಹಶಿಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ತಾಳಿಕೋಟಿ ಪಟ್ಟಣದ ತಹಶಿಲ್ದಾರ್ ಕಚೇರಿಗೆ ಆಗಮಿಸಿದ್ದ ಗ್ರಾಮಸ್ಥರು ಹಾಗೂ ಸಂಘಟನೆಯ ಪದಾಧಿಕಾರಿಗಳು, ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಾಗಿದ್ದರೂ ಕುಡಿಯುವ ನೀರಿಗೆ ಸಂಬಂಧಿಸಿ ಪೀರಾಪೂರ ಶುದ್ದ ಕುಡಿಯುವ ನೀರಿನ ಘಟಕದಲ್ಲಿ ಜೋಡಿಸಲಾಗಿರುವ ಎಲ್ಲ ಸಾಮಗ್ರಿಗಳು ಕಳಪೆ ಮಟ್ಟದಿಂದ ಜೋಡಣೆ ಮಾಡಲಾಗಿದೆ. ಇದರಿಂದ ನೀರು ಶುದ್ದೀಕರಣವಾಗದೇ ಎಲ್ಲ ಗ್ರಾಮಸ್ಥರಿಗೆ ಪೂರೈಕೆಯಾಗುತ್ತಿದೆ. ಪ್ರತಿ ಗ್ರಾಮಗಳಲ್ಲಿ ಕೈಗೊಳ್ಳಲಾಗಿರುವ ಪೈಪ್ ಲೈನ್ ಕಾಮಗಾರಿಯು ಸಹ ಕಳಪೆ ಮಟ್ಟದಿಂದ ಕೈಗೊಂಡಿದ್ದರಿಂದ ಅಲ್ಲಲ್ಲಿ ಒಡೆದು ಹೋಗಿವೆ. ಕೆಲವು ಚರಂಡಿಯ ನೀರು ಈ ಪೈಪ್ಗಳಲ್ಲಿ ಶೇಖರಣೆಯಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದರಿಂದ ಜನರಿಗೆ ಶುದ್ದ ಕುಡಿಯುವ ನೀರು ಪೂರೈಕೆಯಾಗುವ ಬದಲು ಅಶುದ್ದ ನೀರು ಪೂರೈಕೆಯಾಗಲು ಕಾರಣವಾಗಿದೆ. ಇಂತಹ ಅಶುದ್ದ ನೀರು ಸೇವನೆಯಿಂದ ಈಗಾಗಲೇ ಭಂಟನೂರ, ಪೀರಾಪೂರ, ಗೊಟಗುಣಕಿ, ಗಡಿ ಸೋಮನಾಳ, ಒಳಗೊಂಡಂತೆ 10 ಗ್ರಾಮಗಳಲ್ಲಿ ವಾಂತಿ ಭೇಧಿ ಕಾಣಿಸಿಕೊಳ್ಳತೊಡಗಿದೆ. ಕೆಲವರಲ್ಲಿ ಮೈ ತುರಿಕೆ ಉಂಟಾಗಿದ್ದು ಈ ವಿಷಯ ಕುರಿತು ವೈದ್ಯಾಧಿಕಾರಿಗಳನ್ನು ಕೇಳಿದರೆ ಅಶುದ್ದ ಕುಡಿಯುವ ನೀರಿನಿಂದ ಈ ರೀತಿ ಆಗುತ್ತಿದೆ ಎಂದು ಹೇಳುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಕೂಡಲೇ ಈ ಯೋಜನೆಯ ಸಂಬಂಧಿತ 14 ಗ್ರಾಮಸ್ಥರಿಗೆ ಶುದ್ದ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಮತ್ತು ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಕಳಪೆ ಮಟ್ಟದ ಸಾಮಗ್ರಿಗಳನ್ನು ಜೋಡಿಸಿದ ಮತ್ತು ಕಳಪೆ ಮಟ್ಟದ ಪೈಪ್ ಲೈನ್‌ಗಳನ್ನು ಜೋಡಿಸಿದ ಗುತ್ತಿಗೆದಾರನ ಮೇಲೆ ಮತ್ತು ಸಂಬಂಧಿಸಿದ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಜಯ ಕರ್ನಾಟಕ ಸಂಘಟನೆಯ ತಾಲೂಕಾ ಅಧ್ಯಕ್ಷ ಬಸವರಾಜ ಶಿಂಗನಹಳ್ಳಿ, ಮಲ್ಲನಗೌಡ ಆನೇಸೂರ, ಪ್ರಭುಗೌಡ ಐನಾಪೂರ ಇತರರು ಉಪಸ್ಥಿತರಿದ್ದರು.