ವಿಜಯಪುರ: ದರೋಡೆ ಪ್ರಕರಣದಲ್ಲಿ ಬಂಧಿತರಾಗಿದ್ದ ಮೂವರು ಆರೋಪಿಗಳಲ್ಲಿ ಇಬ್ಬರಿಗೆ ಕೊರೊನಾ ಪಾಸಿಟಿವ್ ಬಂದ ಪರಿಣಾಮ ಪ್ರಕರಣ ಭೇದಿಸಿದ್ದ ಪೊಲೀಸರು ಕೂಡಾ ಇದೀಗ ಕ್ವಾರಂಟೈನ್ಗೆ ಒಳಗಾಗಬೇಕಿದೆ.
ಮಹಾರಾಷ್ಟ್ರದಿಂದ ಬಂದ ದಂಪತಿಯಿಂದ 8 ರಿಂದ 9 ಲಕ್ಷ ರೂಪಾಯಿ ದೋಚಿದ್ದ ಆರೋಪಿಗಳನ್ನು ಬಂಧಿಸಲು ಮೂರು ತಂಡಗಳನ್ನು ರಚಿಸಿ ಅವರನ್ನು ಸೆರೆಹಿಡಿಯಲಾಗಿತ್ತು. ಹೀಗೆ ಬಂಧಿಸಿದ ಮೂವರು ಆರೋಪಿಗಳಲ್ಲಿ ಇಬ್ಬರಿಗೆ ಸೋಂಕು ದೃಢವಾಗಿದ್ದರಿಂದ ಇದೀಗ ಆಲಮೇಲ, ಸಿಂದಗಿ ಹಾಗೂ ಇಂಡಿ ಠಾಣೆಗಳ ಪೊಲೀಸರಲ್ಲಿಯೂ ಆತಂಕ ಮನೆಮಾಡಿದೆ.
ಜೂನ್ 17ರಂದು ಆರೋಪಿಗಳನ್ನು ಬಂಧಿಸಿದ ವೇಳೆ ಕೊರೊನಾ ಟೆಸ್ಟ್ ಗೆ ಗಂಟಲು ದ್ರವ ಕಳುಹಿಸಲಾಗಿದ್ದು, ಇದೀಗ ಇಬ್ಬರ ವರದಿ ಪಾಸಿಟಿವ್ ಬಂದಿರುವುದರಿಂದ ಪೊಲೀಸ್ ಇಲಾಖೆಯೇ ಬೆಚ್ಚಿಬಿದ್ದಿದೆ. ಇನ್ನು ಪ್ರಾಥಮಿಕ ಸಂಪರ್ಕದಲ್ಲಿದ್ದ ಇಬ್ಬರು ಪಿ ಎಸ್ ಐ ಗಳು ಹಾಗೂ 14 ಪೊಲೀಸ್ ಸಿಬ್ಬಂದಿಯನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ.
ದರೋಡೆಕೋರರ ಜೊತೆಗೆ ಕೊರೊನಾ ಮಹಾಮಾರಿಯನ್ನು ಹೊತ್ತು ತಂದಿದ್ದೇವೆ ಎಂಬುದು ಪ್ರಕರಣವನ್ನು ಭೇದಿಸಿ ಸಂಭ್ರಮದಲ್ಲಿದ್ದ ಪೊಲೀಸರಿಗೆ ತಿಳಿದಿರಲಿಲ್ಲ. ಸಿಬ್ಬಂದಿ ಮಾತ್ರವಲ್ಲದೆ ಪ್ರಕರಣದ ವಿಚಾರಣೆ ನಡೆಸಿದ ಓರ್ವ ನ್ಯಾಯಾಧೀಶರು ಸಹ ಹೋಮ್ ಕ್ವಾರಂಟೈನ್ ಆಗಿದ್ದಾರೆ.
ಈಗಾಗಲೇ ಲ್ಯಾಬ್ಗೆ ಕಳುಹಿಸಿರುವ 39 ವರದಿಗಳಲ್ಲಿ ಒಂದು ವೇಳೆ ಪಾಸಿಟಿವ್ ಬಂದಲ್ಲಿ ಠಾಣೆಗಳನ್ನು ಸೀಲ್ಡೌನ್ ಮಾಡಬೇಕಾ? ಬೇಡವಾ ಎಂಬುದರ ಕುರಿತು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಚಿಂತನೆ ನಡೆಸಿವೆ.
9 ಜನರು ಸೇರಿ ನಡೆಸಿದ್ದ ದರೋಡೆಯಲ್ಲಿ ಮೂವರು ಸಿಕ್ಕಿದ್ದು ಇನ್ನುಳಿದ ಆರೋಪಿಗಳಿಗೂ ಸೋಂಕು ಇದೆಯಾ ಎಂಬುದು ಆತಂಕಕ್ಕೆ ಕಾರಣವಾಗಿದೆ. ಜೊತೆಗೆ ದರೋಡೆಗೊಳಗಾದ ಮಹಾರಾಷ್ಟ್ರ ಮೂಲದ ದಂಪತಿಗೂ ಸೋಂಕು ತಪಾಸಣೆ ನಡೆಸುವ ಅಗತ್ಯದ ಕುರಿತು ಚರ್ಚಿಸಲಾಗಿದೆ.