ವಿಜಯಪುರ : ಜಿಲ್ಲಾಸ್ಪತ್ರೆಗೆ ದಾಖಲಾಗುವ ಕೊರೊನಾ ರೋಗಿಗಳು ಮೊಬೈಲ್ ಬಳಕೆ ನಿಷೇಧಿಸಲಾಗಿದೆ. ಇದರ ಜೊತೆ ತೀವ್ರ ಉಸಿರಾಟದ ತೊಂದರೆ ಇರುವ ರೋಗಿಯನ್ನು ನೋಡಲು ಸಂಬಂಧಿಕರೊಬ್ಬರಿಗೆ ಮಾತ್ರ ಅವಕಾಶ ನೀಡಲು ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ಸೂಚನೆ ನೀಡಿದ್ದಾರೆ.
ಎರಡು ದಿನಗಳ ಹಿಂದೆ ಬೆಳಗಾವಿ ವಿಮ್ಸ್ ಆಸ್ಪತ್ರೆ ಬಳಿ ನಡೆದ ಘಟನೆ ವಿಜಯಪುರ ಜಿಲ್ಲೆಯಲ್ಲಿಯೂ ನಡೆಯಬಾರದು ಎನ್ನುವ ಕಾರಣಕ್ಕೆ ಇಂಥ ಕ್ರಮಕ್ಕೆ ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ಮುಂದಾಗಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಂಬಂಧ ನಿನ್ನೆ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಯೊಂದಿಗೆ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು. ರೋಗಿ ಜತೆ ನಾಲ್ಕೈದು ಜನ ಸಂಬಂಧಿಕರು, ಸ್ನೇಹಿತರು ಆಸ್ಪತ್ರೆ ಸುತ್ತಮುತ್ತ ಬರುವ ಕಾರಣ ಸ್ವಲ್ಪ ತೊಂದರೆಯಾಗುತ್ತದೆ. ವೈದ್ಯರು ಸಹ ಕಳೆದ ನಾಲ್ಕು ತಿಂಗಳಿಂದ ಸತತ ಕೆಲಸ ಮಾಡುತ್ತಿದ್ದಾರೆ. ಈ ವೇಳೆ ಅವರು ಸಹ ತಾಳ್ಮೆ ಕಳೆದುಕೊಳ್ಳಬಹುದು. ಇದರಿಂದ ಏನಾದರೂ ಅನಾಹುತವಾದರೆ ಬೇರೆ ರೋಗಿಗಳಿಗೆ ತೊಂದರೆಯಾಗುತ್ತದೆ. ಇದಕ್ಕಾಗಿ ಪಾಸಿಟಿವ್ ರೋಗಿಗೆ ಆಸ್ಪತ್ರೆಯಲ್ಲಿ ಮೊಬೈಲ್ ಬಳಕೆ ಮಾಡಲು ನಿಷೇಧಿಸಲಾಗಿದೆ. ರೋಗಿ ಆರೋಗ್ಯ ಸೂಕ್ಷ್ಮವಾಗಿದ್ರೆ, ಐಸಿಯುನಲ್ಲಿದ್ದರೆ ಅವರ ಜತೆ ಒಬ್ಬರು ಮಾತ್ರ ಯೋಗ ಕ್ಷೇಮಕ್ಕಾಗಿ ಆಸ್ಪತ್ರೆ ಬಳಿ ಬರಬಹುದು ಎಂದರು.
ಇದರ ಜತೆ ಡ್ಯೂಟಿ ಡಾಕ್ಟರ್ಗಳ ಫೋನ್ ನಂಬರ್ ಸಹ ಡಿಸ್ಪ್ಲೇ ಮಾಡಲು ಸೂಚಿಸಲಾಗಿದೆ. ರೋಗಿಯ ಆರೋಗ್ಯ ವಿಚಾರಿಸಲು ವೈದ್ಯರನ್ನು ರೋಗಿಯ ಸಂಬಂಧಿಕರು ದೂರವಾಣಿ ಕರೆ ಮಾಡಬಹುದು. ರೋಗಿ ಆರೋಗ್ಯ ಅಪಡೇಟ್ ಸಹ ವೈದ್ಯರು ಸಂಬಂಧಿಕರಿಗೆ ತಿಳಿಸುವ ವ್ಯವಸ್ಥೆ ಮಾಡಲಾಗುವುದು ಎಂದರು. ಸಾರ್ವಜನಿಕರು ಹಾಗೂ ಆಸ್ಪತ್ರೆ ಸಿಬ್ಬಂದಿ ತಾಳ್ಮೆಯಿಂದ ನಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.