ವಿಜಯಪುರ: ಮಹಾರಾಷ್ಟ್ರದಲ್ಲಿ ತುಂಬಿ ಹರಿಯುತ್ತಿರುವ ಜಲಾಶಯಗಳಿಂದ ರಾಜ್ಯದ ಆಲಮಟ್ಟಿ ಜಲಾಶಯಗಳಿಗೆ ಹೆಚ್ಚುವರಿ ನೀರು ಬಿಡುಗಡೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಒಳಹರಿವಿನಷ್ಟೇ ಹೊರಹರಿವು ಸಹ ಮತ್ತಷ್ಟು ಹೆಚ್ಚಿಸಲಾಗಿದೆ.
ಜಿಲ್ಲೆಯ ನಿಡಗುಂದಿ ತಾಲೂಕಿನ ಲಾಲ್ ಬಹದ್ದೂರ್ ಶಾಸ್ತ್ರಿ (ಆಲಮಟ್ಟಿ) ಜಲಾಶಯಕ್ಕೆ 2,41,714 ಕ್ಯೂಸೆಕ್ ನೀರು ಒಳಹರಿವು ಇದೆ. ಹಾಗಾಗಿ 2,51,922 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಜಲಾಶಯದ ಎಲ್ಲಾ 26 ಕ್ರಸ್ಟ್ ಗೇಟ್ ಮೂಲಕ ನೀರು ಬಿಡಲಾಗುತ್ತಿದೆ.
ಎರಡು ದಿನಗಳ ಹಿಂದೆ ರಾಜಾಪುರ ಜಲಾಶಯದಿಂದ ಬಿಟ್ಟಿರುವ ನೀರು ಇಂದು ಆಲಮಟ್ಟಿ ಜಲಾಶಯಕ್ಕೆ ಬಂದು ತಲುಪಿದೆ. ಕಾರಣ ಈಗ ಜಲಾಶಯದ ನೀರಿನ ಸಂಗ್ರಹ 97.554 ಟಿಎಂಸಿ ಆಗಿದೆ. ಇದನ್ನು ಸರಿದೂಗಿಸಲು ಜಲಾಶಯದಿಂದ ಬೆಳಗ್ಗೆ 2.51,922 ಕ್ಯೂಸೆಕ್ ನೀರು ನಾರಾಯಣಪುರ ಜಲಾಶಯಕ್ಕೆ ಹರಿಬಿಡಲಾಗಿದೆ. ಮಂಗಳವಾರ ಬೆಳಗ್ಗೆ 2.50 ಲಕ್ಷ ಕ್ಯೂಸೆಕ್ ನೀರು ಹೊರಹರಿವು ಇತ್ತು. ಸಂಜೆ ಸಹ 2.50 ಲಕ್ಷ ಕ್ಯೂಸೆಕ್ ನೀರು ಬಿಡಲಾಗಿತ್ತು. ಇಂದು ಸಹ ನೀರು ಹೊರ ಬಿಡುವ ಪ್ರಮಾಣ ಮತ್ತಷ್ಟು ಹೆಚ್ಚಿಸಲಾಗಿದೆ. ಸದ್ಯ ಜಲಾಶಯದಿಂದ 2,51,922 ಕ್ಯೂಸೆಕ್ ನೀರು ನದಿಗೆ ಬಿಡಲಾಗುತ್ತಿದೆ.
ಒಳಹರಿವಿನ ಪ್ರಮಾಣ ಸಹ 2 ಕ್ಯೂಸೆಕ್ ಇದೆ. ಇನ್ನೆರಡು ದಿನ ಇದೇ ಪ್ರಮಾಣದಲ್ಲಿ ಒಳಹರಿವು ಹೆಚ್ಚಳವಾದರೆ ನಾರಾಯಣಪುರ ಹಿನ್ನೀರಿನ ನದಿ ಪಾತ್ರದಲ್ಲಿ ಪ್ರವಾಹ ಎದುರಾಗುವ ಸಾಧ್ಯತೆ ಇದೆ.