ವಿಜಯಪುರ: ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯವಾಗಿರುವ ವಿಜಯಪುರದ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ ನಿತ್ಯ ಹೆಚ್ಚುತ್ತಿದೆ.
ಕೊರೊನಾ ಸೋಂಕಿತ ಅಟೆಂಡರ್ ಮೃತಪಟ್ಟ ನಂತರ ಆತನ ಸಂಪರ್ಕದಲ್ಲಿದ್ದ 7 ಬೋಧಕೇತರ ಸಿಬ್ಬಂದಿಗೆ ಕೊರೊನಾ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಮಹಿಳಾ ವಿವಿಯನ್ನು ಜಿಲ್ಲಾಡಳಿತ ಸೀಲ್ಡೌನ್ ಮಾಡಿದೆ.
ಸೀಲ್ಡೌನ್ ನಂತರವೂ ಮತ್ತೆ 7 ಜನರಲ್ಲಿ ಸೋಂಕು ದೃಢಪಟ್ಟಿದೆ. ಈಗ ಮಹಿಳಾ ವಿವಿಯ ಭೋದಕೇತರ ಸಿಬ್ಬಂದಿ ಕೊರೊನಾ ಪಾಸಿಟಿವ್ ನಿಂದ ಬಳಲುತ್ತಿದ್ದು, ಅವರಿಗೆ ವಿವಿ ಆವರಣದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈಗ ತಾತ್ಕಾಲಿಕವಾಗಿ ವಿವಿ ಆರೋಗ್ಯ ಕೇಂದ್ರವನ್ನು ಕೋವಿಡ್ ಆಸ್ಪತ್ರೆಯಾಗಿ ಪರಿರ್ವತಿಸಲಾಗಿದೆ.
ವಿವಿಯ ಉಳಿದ ಸಿಬ್ಬಂದಿಗೆ ಕಡ್ಡಾಯವಾಗಿ ವರ್ಕ್ ಫ್ರಂ ಹೋಮ್ ನೀಡಲಾಗಿದೆ. ಸೋಂಕು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿದ್ದು, ಅವಶ್ಯವಿದ್ದಲ್ಲಿ ಖಾಸಗಿ ಆಸ್ಪತ್ರೆಯಲ್ಲಿಯೂ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 594ಕ್ಕೆ ತಲುಪಿದೆ. ಹೆಚ್ಚಾಗಿ ಮಹಾರಾಷ್ಟ್ರ ಮತ್ತು ಬೆಂಗಳೂರಿನಿಂದ ಬರುವ ಜನರಲ್ಲಿ ಸೋಂಕಿನ ಗುಣ ಲಕ್ಷಣಗಳು ಕಾಣುತ್ತಿವೆ. ಹೀಗಾಗಿ ಅವಶ್ಯಕತೆ ಇದ್ದರೆ ಬೆಂಗಳೂರಿಗೆ ಹೋಗಿ ಬರುವ ಖಾಸಗಿ ಮತ್ತು ಕೆಎಸ್ ಆರ್ ಟಿಸಿ ಬಸ್ ಸಂಚಾರ ತಾತ್ಕಾಲಿಕವಾಗಿ ಬಂದ್ ಮಾಡಿಸುವ ಚಿಂತನೆಯಲ್ಲಿ ಜಿಲ್ಲಾಡಳಿತ ಇದೆ.