ವಿಜಯಪುರ: ಆಲಮಟ್ಟಿ ಜಲಾಶಯದ ಒಳ ಮತ್ತು ಹೊರ ಹರಿವು ದಿನೇ ದಿನೇ ಹೆಚ್ಚಾಗುತ್ತಿದೆ. ಈಗಾಗಲೇ ನಾರಾಯಣಪುರ ಜಲಾಶಯದ ಹಿನ್ನೀರು ಗ್ರಾಮಗಳ ನೂರಾರು ಎಕರೆ ಜಮೀನಿಗೆ ನೀರು ನುಗ್ಗಿದ್ದು, ಇನ್ನೂ ಎರಡು ದಿನ ಜಲಾಶಯದಿಂದ 2.50 ಲಕ್ಷ ಕ್ಯೂಸೆಕ್ ನೀರು ಹೊರಹರಿಯಲಿದೆ. ಹೀಗಾಗಿ ಮತ್ತಷ್ಟು ಭೂಮಿ ಜಲಾವೃತವಾಗಲಿದ್ದು, ಬಾಧಿತ ಗ್ರಾಮಗಳಲ್ಲಿ ಡಂಗೂರು ಸಾರಿ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಮಹಾರಾಷ್ಟ್ರದ ಮಹಾಬಳೇಶ್ವರ, ಸತಾರ, ಕೊಯ್ನಾ ಪ್ರದೇಶದಲ್ಲಿ ಹಾಗೂ ಕರ್ನಾಟಕದ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಕಳೆದ ಹಲವು ದಿನಗಳಿಂದ ಉತ್ತಮವಾಗಿ ಮಳೆಯಾಗುತ್ತಿದೆ. ಇದರ ಪರಿಣಾಮ ಮಹಾರಾಷ್ಟ್ರದ ಜಲಾಶಯಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಈ ಕಾರಣಕ್ಕೆ ಕೃಷ್ಣಾ ನದಿಗೆ ಹೆಚ್ಚುವರಿ ನೀರು ಹರಿಸಲಾಗುತ್ತಿದೆ. ಕಳೆದ ಮೂರು ದಿನಗಳಿಂದ ಜಲಾಶಯಕ್ಕೆ 1.50 ಲಕ್ಷ ಕ್ಯೂಸೆಕ್ ನೀರು ಒಳಹರಿವು ಇದೆ. ಇದರ ಪರಿಣಾಮ ಆಲಮಟ್ಟಿ ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚುತ್ತಿದೆ. ಜಲಾಶಯಕ್ಕೆ ಯಾವುದೇ ಅಪಾಯ ಎದುರಾಗದಂತೆ ಮಹಾರಾಷ್ಟ್ರ ಹಾಗೂ ಕರ್ನಾಟಕ ಸರ್ಕಾರ ನೇಮಿಸಿರುವ ಅಧಿಕಾರಿಗಳ ಸಮನ್ವಯದಿಂದ ನೀರಿಗೆ ಅನುಗುಣವಾಗಿ ಜಲಾಶಯದಿಂದ ಹೊರ ಹರಿವು ಹೆಚ್ಚಳ ಮಾಡಲಾಗಿದೆ. ಸದ್ಯ ಕಳೆದ ಮೂರು ದಿನಗಳಿಂದ ಜಲಾಶಯದ 26 ಕ್ರೆಸ್ಟ್ ಗೇಟ್ ಗಳ ಮೂಲಕ ಹೊರ ಹರಿವು ಪ್ರಮಾಣ 2.50 ಲಕ್ಷ ಕ್ಯೂಸೆಕ್ ಕಾಪಾಡಿಕೊಂಡು ಬರಲಾಗುತ್ತಿದೆ.
ಇದರ ಜೊತೆ ರಾಜಾಪುರ ಡ್ಯಾಂ ನಿಂದ ಹೆಚ್ಚುವರಿಯಾಗಿ ಬಿಟ್ಟಿರುವ ನೀರು ಆಲಮಟ್ಟಿ ಜಲಾಶಯ ತಲುಪಲು ಕನಿಷ್ಠ 48 ಗಂಟೆ ಅವಧಿ ಬೇಕಾಗಿದೆ. ಬೆಳಗಾವಿ ಜಿಲ್ಲೆಯ ಘಟಪ್ರಭಾ ಭಾಗದಲ್ಲಿಯೂ ಸಹ ಉತ್ತಮ ಮಳೆಯಾಗಿದ್ದು, ಘಟಪ್ರಭಾ ನದಿಯಿಂದಲೂ ಕೃಷ್ಣಾ ಜಲಾಶಯಕ್ಕೆ ಬಿಟ್ಟಿರುವ ನೀರು ಬಂದು ತಲುಪಲು 20 ಗಂಟೆ ಯಾದರೂ ಬೇಕಾಗಿದೆ. ಈ ಕಾರಣಕ್ಕೆ ಆಲಮಟ್ಟಿ ಜಲಾಶಯದಿಂದ ನಾರಾಯಣಪುರ ಜಲಾಶಯಕ್ಕೆ ಮುಂದಿನ ಎರಡು ದಿನ 2.64 ಲಕ್ಷ ಕ್ಯೂಸೆಕ್ ನಷ್ಟು ನೀರು ಬಿಡಲು ನಿರ್ಧರಿಸಲಾಗಿದೆ. ಇದಕ್ಕಾಗಿ ನಾರಾಯಣಪುರ ಜಲಾಶಯ ಹಾಗೂ ರಾಯಚೂರು ಜಿಲ್ಲಾಡಳಿತದ ಜೊತೆ ಸಂಪರ್ಕ ಹೊಂದಿದ್ದು, ಅವರ ಮಾಹಿತಿಗನುಗುಣವಾಗಿ ಒಳ ಮತ್ತು ಹೊರ ಹರಿವು ನಿಯಂತ್ರಣವನ್ನು ಕೃಷ್ಣಾ ಭಾಗ್ಯ ಜಲ ನಿಗಮ ಮಂಡಳಿ ನಿರ್ವಹಿಸುತ್ತಿದೆ.
ಸದ್ಯ ನಾರಾಯಣಪುರ ಜಲಾಶಯದ ಹಿನ್ನೀರಿನಿಂದ ಬಾಧಿತವಾಗಿರುವ ನಿಡಗುಂದಿ ಹಾಗೂ ಮುದ್ದೇಬಿಹಾಳ ತಾಲೂಕಿನ ನದಿ ಪಾತ್ರದ ಗ್ರಾಮಗಳಾಗಿರುವ ಕಾಶಿನಕುಂಟೆ, ಯಲ್ಲಮ್ಮನ ಬೂದಿಹಾಳ, ಹೊಳೆ ಮಸೂತಿ ಗ್ರಾಮದ ಹೊಲಗಳಿಗೆ ನೀರು ನುಗ್ಗಿದೆ. ಕಳೆದ ವರ್ಷದಂತೆ ಈ ವರ್ಷ ಹೆಚ್ಚು ಬೆಳೆ ನಾಶವಾಗದಂತೆ ಕೆಬಿಜೆಎನ್ಎಲ್ ಮುನ್ನೆಚ್ಚರಿಕೆ ವಹಿಸಿದೆ.