ಮುದ್ದೇಬಿಹಾಳ: ಸರ್ಕಾರಕ್ಕೆ ವಂಚಿಸಿ ಪುರಸಭೆ ವ್ಯಾಪ್ತಿಯ ಮಳಿಗೆಗಳನ್ನು ಹೆಚ್ಚುವರಿಯಾಗಿ ಬೇರೆಯವರಿಗೆ ಬಾಡಿಗೆ ನೀಡಿದವರನ್ನು ಖಾಲಿ ಮಾಡಿಸಿ ಎಂದು ಅಧಿಕಾರಿಗಳಿಗೆ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಸೂಚಿಸಿದರು.
ಇಲ್ಲಿನ ಅರಣ್ಯ ಇಲಾಖೆಯ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಪುರಸಭೆಯಿಂದ ಕೇವಲ 500ರಿಂದ 1500ರವರೆಗೆ ಬಾಡಿಗೆ ಪಡೆದು, ಬೇರೆಯವರಿಗೆ 50 ಸಾವಿರ ರೂಪಾಯಿಗೆ ಬಾಡಿಗೆ ನೀಡುತ್ತಿದ್ದಾರೆ. ಇದರಿಂದ ಸರ್ಕಾರಕ್ಕೆ ಬರುವ ಆದಾಯಕ್ಕೆ ಕೊಕ್ಕೆ ಹಾಕಿದ್ದಾರೆ. ಪುರಸಭೆಯ ಆಸ್ತಿಯನ್ನು ಸ್ವಂತ ಆಸ್ತಿಯಾಗಿ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಮಂಜುನಾಥಗೌಡ ಪಾಟೀಲ, ಹಿರಿಯ ಅರಣ್ಯಾಧಿಕಾರಿ ವಿ.ಬಿ.ನಾಯಕ, ಪುರಸಭೆ ಸದಸ್ಯ ಯಲ್ಲಪ್ಪ ನಾಯ್ಕಮಕ್ಕಳ, ಸಿಪಿಐ ಆನಂದ ವಾಘಮೋಡೆ, ಪಿಎಸ್ಐ ಮಲ್ಲಪ್ಪ ಮಡ್ಡಿ, ಭೂ ಸೇನಾ ನಿಗಮದ ಸಿಬ್ಬಂದಿ ಮಹಾಂತೇಶ, ಪುರಸಭೆ ಸದಸ್ಯರು, ಅರಣ್ಯ ಇಲಾಖೆಯ ಸಹಾಯಕ ಅಧಿಕಾರಿಗಳು, ಸಿಬ್ಬಂದಿ ಇದ್ದರು.
ಇದೇ ಸಂದರ್ಭದಲ್ಲಿ ಉತ್ತಮ ಸಾಧನೆಗಾಗಿ ಮುಖ್ಯಮಂತ್ರಿಗಳಿಂದ ಚಿನ್ನದ ಪದಕ ವಿಜೇತ ಅಧಿಕಾರಿ ಸಂತೋಷ ಅಜೂರ ಅವರನ್ನು ಸನ್ಮಾನಿಸಲಾಯಿತು.
ಅರಣ್ಯಾಧಿಕಾರಿಗಳ ಕಟ್ಟಡ ಉದ್ಘಾಟನೆ: ನಾವು ಬೆಳೆಸಿದ ಮಕ್ಕಳು ಬಿಡಬಹುದು, ಆದರೆ ಸಸಿಗಳು ಎಂದಿಗೂ ಕೈ ಬಿಡುವುದಿಲ್ಲ. ಮುಂದಿನಗಳಲ್ಲಿ ಫಲ ನೀಡುತ್ತವೆ. ಸಸಿಗಳನ್ನು ನೆಟ್ಟು ಪೋಷಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಆಹಾರ ಪೂರೈಕೆ ನಿಗಮದ ಅಧ್ಯಕ್ಷ,ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಪಟ್ಟಣದ ಮಹಾಂತೇಶ ನಗರದಲ್ಲಿ ಮಂಗಳವಾರ ನೂತನ ಸಾಮಾಜಿಕ ವಲಯ ಅರಣ್ಯಾಧಿಕಾರಿಗಳ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. ರೈತರು ಹೊಲಗಳ ಬದುಗಳಲ್ಲಿ ಲಾಭದಾಯಕ ಗಿಡಗಳನ್ನು ನೆಟ್ಟು ಆದಾಯ ಮಾಡಿಕೊಳ್ಳಬಹುದು. ಅರಣ್ಯ ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು ಎಂದು ಹೇಳಿದರು.