ಮುದ್ದೇಬಿಹಾಳ: ಮತಕ್ಷೇತ್ರದ ತಾಳಿಕೋಟೆ ತಾಲೂಕಿನ ವ್ಯಾಪ್ತಿಯಲ್ಲಿ 23ಕ್ಕೂ ಹೆಚ್ಚು ಅನಧಿಕೃತ ವಸತಿ ಶಾಲೆಗಳಿದ್ದು, ಕಲಕೇರಿ ಭಾಗದಲ್ಲಿ ಐದು ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಈ ಶಾಲೆಗಳಲ್ಲಿ ವಿದ್ಯಾರ್ಥಿಗಳಿಂದ 50 ರಿಂದ 60 ಸಾವಿರ ರೂಪಾಯಿ ಹೆಚ್ಚುವರಿ ಹಣ ವಸೂಲಿ ಮಾಡಲಾಗುತ್ತಿದೆ ಎಂದು ತಾಲೂಕು ಪಂಚಾಯಿತಿ ಸದಸ್ಯ ಪ್ರಭುಗೌಡ ಬಿರಾದಾರ (ಅಸ್ಕಿ) ಹಾಗೂ ಲಕ್ಕಪ್ಪ ಬಡಿಗೇರ ಆರೋಪಿಸಿದರು.
ತಾಲೂಕು ಪಂಚಾಯಿತಿ ಪ್ರಥಮ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸದಸ್ಯರು, ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಈ ಎಲ್ಲ ಅಕ್ರಮಗಳು ತಿಳಿದಿದ್ದರೂ ಮೌನ ವಹಿಸಿದ್ದಾರೆ. ಪ್ರತಿ ಸಾಮಾನ್ಯ ಸಭೆಗೆ ಸಿಂದಗಿ ತಾಲೂಕಿನ ಶಿಕ್ಷಣಾಧಿಕಾರಿಗಳು ನೆಪಗಳನ್ನು ಹೇಳಿ ಗೈರಾಗುತ್ತಿದ್ದು, ಪ್ರತಿನಿಧಿಯಾಗಿ ಯಾವುದೋ ಶಾಲೆಯ ಮುಖ್ಯ ಗುರುಗಳನ್ನು ಸಭೆಗೆ ಕಳಿಸಿದ್ದಾರೆ. ಇಂಥವರಿಗೆ ತಾಲೂಕಿನ ಪರಿಸ್ಥಿತಿ ಹೇಗೆ ತಿಳಿದಿರಲು ಸಾಧ್ಯ ಎಂದು ಹರಿಹಾಯ್ದರು. ಜೊತೆಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಯಿತು.
ಕಲಕೇರಿ ಭಾಗದಲ್ಲಿ ಅಂಗನವಾಡಿ ಮಕ್ಕಳಿಗೆ ಆಹಾರ ಧಾನ್ಯ ಸರಿಯಾಗಿ ತಲುಪುತ್ತಿಲ್ಲ, ಅಂಗನವಾಡಿ ಮಕ್ಕಳಿಗಾಗಿ, ಬಾಣಂತಿಯರಿಗಾಗಿ ಬರುವ ಎಲ್ಲ ಆಹಾರ ಧಾನ್ಯವನ್ನು ಅಲ್ಲಿಯ ಅಂಗನವಾಡಿ ಕಾರ್ಯಕರ್ತೆಯರು ಮನೆಯಲ್ಲಿಯೇ ಇಳಿಸಿಕೊಳ್ಳುತ್ತಾರೆ. ಬಾಣಂತಿಯರಿಗೆ ಆಹಾರ ಧಾನ್ಯ ಹಂಚಿಕೆಯಾಗುತ್ತಿಲ್ಲ. ಈ ವಿಷಯ ಕುರಿತು ಅಧಿಕಾರಿಗಳು ಗಮನಹರಿಸಬೇಕೆಂದು ತಾಪಂ ಸದಸ್ಯ ಲಕ್ಕಪ್ಪ ಬಡಿಗೇರ ಒತ್ತಾಯಿಸಿದರು.
ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ತಾಳಿಕೋಟೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಇದೆ. ಇದನ್ನು ನೀಗಿಸಿಕೊಡಬೇಕೆಂದು ಡಾ. ಸತೀಶ ಹುಕ್ಕೇರಿ ಸದಸ್ಯರಿಗೆ ಮನವಿ ಮಾಡಿದರು.
ಕೃಷಿ ಇಲಾಖೆಗೆ ಸಂಬಂಧಿಸಿ ಪ್ರಗತಿ ವಿಷಯ ಚರ್ಚೆಗೆ ಬಂದಾಗ ತಾಲೂಕಿನ ಭೌಗೋಳಿಕ ಕ್ಷೇತ್ರ, ಬಿತ್ತನೆ ಪ್ರಮಾಣವನ್ನು ಮಹೇಶ ಜೋಶಿ ಅವರು ವಿವರಿಸಿ, ಬಿತ್ತಿದ ಬೆಳೆ ಎತ್ತರ ಬೆಳೆದು ನಿಂತಿದೆ. ಕ್ರಿಮಿನಾಶಕ ಸಿಂಪರಣೆ ಮಾಡಬೇಕು. ಅದಕ್ಕೆ ಸಂಬಂಧಿಸಿದ ಪಂಪುಗಳ ವಿತರಣೆಯಾಗಿಲ್ಲ ಎಂದರು.
ತಾಲೂಕಿನಲ್ಲಿ ಕಳಪೆ ಬೀಜ ಮಾರಾಟದ ಬಗ್ಗೆ ದೂರುಗಳು ಬಂದಿವೆ. ಅನಧಿಕೃತ ಅಂಗಡಿಗಳಲ್ಲಿ ಬೀಜಗೊಬ್ಬರ ಮಾರಾಟವಾಗುತ್ತಿದ್ದರೂ ಯಾವುದೇ ರೀತಿಯ ಕ್ರಮಗಳನ್ನು ಕೈಗೊಂಡಿಲ್ಲ. ಕೂಡಲೇ ಅನಧಿಕೃತ ಅಂಗಡಿಗಳನ್ನು ಸೀಜ್ ಮಾಡಿ ಕ್ರಮ ಜರುಗಿಸಬೇಕು. ಸದ್ಯ ಬೆಳೆಗಳಿಗೆ ಕ್ರಿಮಿನಾಶಕ ಸಿಂಪಡಣೆಯಾಗಬೇಕು. ಸಬ್ಸಿಡಿ ರೂಪದಲ್ಲಿ ಪಂಪ್ಸೆಟ್ಗಳು ವಿತರಣೆಯಾಗುವಂತೆ ಕ್ರಮ ಜರುಗಿಸಬೇಕೆಂದು ತಾಪಂ ಸದಸ್ಯರು ಒತ್ತಾಯಿಸಿದರು.
ಗೈರು ಉಳಿದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಲು ಇಓಗೆ ಅಧ್ಯಕ್ಷರು ಸೂಚಿಸಿದರು. ಸಭೆಯ ಅಧ್ಯಕ್ಷತೆಯನ್ನು ತಾಪಂ ಅಧ್ಯಕ್ಷ ರಾಜುಗೌಡ ಬಿರಾದಾರ (ಕೊಳೂರ) ವಹಿಸಿದ್ದರು. ತಾಪಂ ಉಪಾಧ್ಯಕ್ಷೆ ರೇಣುಕಾ ಪಾಟೀಲ, ತಹಶೀಲ್ದಾರ್ ಅನೀಲಕುಮಾರ ಢವಳಗಿ, ಕಾರ್ಯನಿರ್ವಾಹಕ ಅಧಿಕಾರಿ ಶಶಿಕಾಂತ ಶಿವಪೂರೆ ಹಾಗೂ ಅಧಿಕಾರಿಗಳು ಇದ್ದರು.