ವಿಜಯಪುರ: ಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಾವು ಮುಖ್ಯಮಂತ್ರಿ ರೇಸ್ನಲ್ಲಿ ಇರುವುದಾಗಿ ಮಾಜಿ ಡಿಸಿಎಂ ಜಿ. ಪರಮೇಶ್ವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ, ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ಪರಮೇಶ್ವರ ಒಳ್ಳೆಯ ರಾಜಕಾರಣಿ. ಅಧಿಕಾರಕ್ಕಾಗಿ ಕಾಂಗ್ರೆಸ್ನಲ್ಲಿ ಲಡಾಯಿ ಇಲ್ಲ, ನಮ್ಮ ಲಡಾಯಿ ಇರೋದು ಬಿಜೆಪಿ ಸರ್ಕಾರದ ವಿರುದ್ಧ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಕ್ಕೆ ಲಡಾಯಿ ಇದೆ. ಅಧಿಕಾರಕ್ಕಾಗಿ ಆಸೆ, ಇಚ್ಛೆ ಇಟ್ಟುಕೊಳ್ಳುವುದು ತಪ್ಪು ಅಲ್ಲ ಎಂದು ಪರಮೇಶ್ವರ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಬಿಎಲ್ ಡಿಇ ಕ್ಯಾಂಪಸ್ ಆವರಣದಲ್ಲಿರುವ 770 ಲಿಂಗಗಳ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ನಂತರ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಭ್ರಷ್ಟಾಚಾರದಲ್ಲಿ ತೊಡಗಿರುವ ಸರ್ಕಾರದ ವಿರುದ್ಧ ಲಡಾಯಿ ಆಗಿದೆ. ನಮ್ಮ ಲಡಾಯಿ ಅಧಿಕಾರಕ್ಕೆ ಅಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು. ನಮ್ಮ ಪಕ್ಷದ ಎಲ್ಲ ನಾಯಕರು, ಕಾರ್ಯಕರ್ತರಿಗೆ ಒಂದೇ ಗುರಿ ಇರೋದು, ಅದು ಬ್ರ್ಯಾಂಡ್ ಕರ್ನಾಟಕ ನಿರ್ಮಾಣದ ಗುರಿ ಎಂದರು.
ಬಜೆಟ್ ಕೇವಲ ಘೋಷಣೆ ಮಾತ್ರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿನ್ನೆ ಮಂಡಿಸಿದ ರಾಜ್ಯ ಬಜೆಟ್ ಹೆಸರಿಗೆ ಮಾತ್ರ ಬಜೆಟ್ ಆಗಿದೆ. ಅಧಿಕಾರದಲ್ಲಿ ನಾಲ್ಕು ವರ್ಷ ಇದ್ದರೂ ಜನರ ಒಳಿತಿಗಾಗಿ ಒಂದು ಯೋಜನೆಯೂ ಜಾರಿ ಮಾಡಲಿಲ್ಲ, ಈಗ ಅಧಿಕಾರಾವಧಿ ಮುಗಿಯಲು ಕೇವಲ 20 ದಿನ ಉಳಿದಾಗ ಜನಪರ ಯೋಜನೆಗಳನ್ನು ಘೋಷಣೆ ಮಾಡಿದೆ. ಇದರಲ್ಲಿ ಯಾವುದೇ ಅರ್ಥವಿಲ್ಲ ಎಂದರು.
ಇದನ್ನೂ ಓದಿ: ಕಾಂಗ್ರೆಸ್ನಲ್ಲಿ 10 ಜನಕ್ಕೆ ಸಿಎಂ ಆಗುವ ಆಸೆ, ಅದ್ರಲ್ಲಿ ನಾನೂ ಒಬ್ಬ: ಪರಮೇಶ್ವರ್ ಹೇಳಿಕೆ
ಕಾಂಗ್ರೆಸ್ ಈಗಾಗಲೇ ಚುನಾವಣೆ ದಿನಾಂಕ ನಿಗದಿ ಆಗುವ ಮುನ್ನವೇ ನಾವು ಅಧಿಕಾರಕ್ಕೆ ಬಂದರೆ ಮಹಿಳೆಯರ ಅಕೌಂಟ್ಗೆ ಪ್ರತಿ ತಿಂಗಳು 2 ಸಾವಿರ ರೂ. ಹಾಕುವುದಾಗಿ ಹೇಳಿದ್ದೇವೆ. ಎಲ್ಲ ವರ್ಗದವರಿಗೂ 200 ಯೂನಿಟ್ ವಿದ್ಯುತ್ ಉಚಿತ ನೀಡುವುದಾಗಿ ಭರವಸೆ ನೀಡಿದ್ದೇವೆ. ನಮ್ಮ ಭರವಸೆಗಳನ್ನು ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಖಂಡಿತ ಈಡೇರಿಸುತ್ತೇವೆ ಎಂದರು.
ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ನನಗೆ ವಿಶೇಷ ಅಧಿಕಾರ ಇಲ್ಲ. ಪಕ್ಷದ ಎಲ್ಲ ನಾಯಕರು ಒಗ್ಗಟ್ಟಾಗಿ ನಿರ್ಧಾರ ಮಾಡುತ್ತಾರೆ. ಸತೀಶ ಜಾರಕಿಹೊಳಿ, ಎಂ ಬಿ ಪಾಟೀಲ್, ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ ಈ ಬಗ್ಗೆ ನಿರ್ಧಾರ ಮಾಡುತ್ತಾರೆ. ಸಾಮೂಹಿಕ ನಾಯಕತ್ವದಲ್ಲಿ ಅಭ್ಯರ್ಥಿ ಘೋಷಣೆ ಬಗ್ಗೆ ನಿರ್ಧಾರ ಮಾಡಲಾಗುತ್ತದೆ. ಎಲ್ಲ ಆಯಾಮಗಳನ್ನು ಪರಿಗಣಿಸಿ ಅಭ್ಯರ್ಥಿ ಘೋಷಣೆ ಮಾಡಲಾಗುವುದು, ಆದಷ್ಟು ಬೇಗ ಅಭ್ಯರ್ಥಿಗಳನ್ನು ಚುನಾವಣೆ ಆಖಾಡಕ್ಕೆ ಇಳಿಸುತ್ತೇವೆ. ಅಭ್ಯರ್ಥಿಗಳನ್ನು ಬೇಗ ಕಣಕ್ಕಿಳಿಸುವ ಅಗತ್ಯವಿದೆ ಎಂದು ಸುರ್ಜೆವಾಲ್ ಹೇಳಿದರು.
ಈ ಚುನಾವಣೆ ಇಬ್ಬರ ನಡುವೆ ನಡೆಯುತ್ತಿದೆ ಎನ್ನುವ ಮೂಲಕ ಜೆಡಿಎಸ್ ಪಕ್ಷ ಲೆಕ್ಕಕ್ಕಿಲ್ಲ ಎನ್ನುವ ದಾಟಿಯಲ್ಲಿ ಮಾತನಾಡಿದರು. ಕರ್ನಾಟಕದ ಜನ ಹಾಗೂ ಕಾಂಗ್ರೆಸ್ ಒಂದು ಕಡೆ ಇದೆ. ಭ್ರಷ್ಟಾಚಾರ ಬೊಮ್ಮಾಯಿ ಸರ್ಕಾರ ಮತ್ತೊದು ಕಡೆ ಇದೆ ಎಂದು ಮಾರ್ಮಿಕವಾಗಿ ನುಡಿದರು. ಮಹಾಶಿವರಾತ್ರಿಯಂದು ಕೆಟ್ಟದನ್ನು ಹೋಗಲಾಡಿಸಲಾಗುತ್ತದೆ. ಕರ್ನಾಟಕದಲ್ಲೂ ಬೊಮ್ಮಾಯಿ ಭ್ರಷ್ಟ ಸರ್ಕಾರ ಹೋಗಲಾಡಿಸಲಾಗುತ್ತದೆ. ಚುನಾವಣೆಯಲ್ಲಿ ಮತದಾನದ ಮೂಲಕ ಕೆಟ್ಟದ್ದನ್ನು ಜನರು ತೆಗೆದು ಹಾಕಲಿದ್ದಾರೆ ಎಂದರು.
ಇದನ್ನೂ ಓದಿ: ಬಿಜೆಪಿ ಸರ್ಕಾರ ವಿದಾಯ ಹೇಳುವ ಕಾಲ ಬಂದಿದೆ: ಸುರ್ಜೆವಾಲಾ