ವಿಜಯಪುರ: ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗೂ ನಾನು ಜನ್ರ ಪರವಾಗಿ ವಾದ ಮಾಡಿದ್ದೆ. ಆಲಮಟ್ಟಿ ಡ್ಯಾಂ ನಿರ್ಮಿಸಲು ಅದೇ ಪುಣ್ಯಾತ್ಮ ಕಾರಣರಾಗಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತಾ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ವಿಜಯಪುರದಲ್ಲಿ ಮಾತನಾಡಿದ ಅವರು, ತಾವು ಪಕ್ಷ ವಿರೋಧಿ ಹೇಳಿಕೆ ನೀಡುತ್ತಿರುವ ಕುರಿತು ಪಕ್ಷದಿಂದ ನೋಟಿಸ್ ಜಾರಿಯಾಗಿದೆಯಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಇಲ್ಲಿಯವರೆಗೆ ಯಾವುದೇ ನೋಟಿಸ್ ಬಂದಿಲ್ಲ. ನೋಟಿಸ್ ನೀಡಿದರೂ ಅದಕ್ಕೆ ತಕ್ಕ ಉತ್ತರ ನೀಡುತ್ತೇನೆ. ಸದ್ಯದ ವಾಸ್ತವ ಕುರಿತು ಹೇಳಿಕೆ ನೀಡಿದ್ದೇನೆ ಹೊರತು ಪಕ್ಷಕ್ಕೆ ಮುಜುಗರ ತರುವ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ಜನ್ರ ಬಗ್ಗೆ ಕೂಗು ಎತ್ತಿರುವುದಕ್ಕೆ ಕೆಲವರು ತಪ್ಪು ಅರ್ಥ ಕಲ್ಪಿಸುತ್ತಾರೆ. ನಾನೇನು ಪಕ್ಷ ವಿರೋಧಿ ಕೆಲಸ ಮಾಡಿಲ್ಲ. ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಿಗೆ ಮತ ಹಾಕಿಲ್ಲ ಎಂದು ಹೇಳಿದರು. ನಿನಗೆ ಟಿಕೆಟ್ ಕೊಡ್ತೇವೆ, 150 ಕೋಟಿ ರೂ ಡೆವಲಪಮೆಂಟ್ ಫಂಡ್ ಕೊಡ್ತೇವೆ ಎಂದಿದ್ರು ಸಿದ್ದರಾಮಯ್ಯ. ಶಂಕರಮೂರ್ತಿ ವಿರುದ್ಧ ಓಟ್ ಹಾಕು ಎಂದು ಸಿದ್ದರಾಮಯ್ಯ ಅವರೇ ಹೇಳಿದ್ದಾಗಲೂ ನಾನು ಹಾಕಿರಲಿಲ್ಲ ಎಂದ ಅವರು, ನಾನು ಪಕ್ಷ ವಿರೋಧಿ ಎಂದು ಯಾವ ಆಧಾರದಲ್ಲಿ ಹೇಳ್ತಿರಿ? ಎಂದು ಮರು ಪ್ರಶ್ನೆ ಹಾಕಿದ್ರು.
ನೋಟಿಸ್ ಕೊಟ್ಟು ಒಬ್ಬ ವ್ಯಕ್ತಿಯನ್ನು ನಾಶ ಮಾಡಿದ್ರೆ ಏನು ಆಗೋದಿಲ್ಲ. ಈಗಲೂ ನಾನು 5 ಸಾವಿರ ಕೋಟಿ ರೂ ಕೊಡಿ ಎಂದು ಪ್ರಧಾನಿಗೆ ಮನವಿ ಮಾಡ್ತೇನೆ. ನನ್ನನ್ನು ಪಕ್ಷದಿಂದ ಉಚ್ಛಾಟನೆ ಮಾಡ್ತಿದ್ರೂ ಮಾಡಲಿ. ನನಗೆ ಸುಳ್ಳು ಹೇಳೋ ಚಟ ಇಲ್ಲ, ಸುಳ್ಳು ಹೇಳೋ ಚಟ ಇದ್ದಿದ್ರೆ ನಾನು ಎಂದೋ ಸಿಎಂ ಆಗಿರ್ತಿದ್ದೆ ಎಂದು ಮಾರ್ಮಿಕವಾಗಿ ನುಡಿದರು.