ವಿಜಯಪುರ: ತಿಕೋಟಾ ತಾಲೂಕಿನ ಹೊನವಾಡ ಗ್ರಾಮದಲ್ಲಿ ಎರಡು ಕೆರೆಗಳ ಹೊಳೆತ್ತುವ ಕಾಮಗಾರಿಯನ್ನು ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕೈಗೆತ್ತಿಕೊಂಡಿದ್ದಾರೆ. ಇದರಿಂದಾಗಿ ನಿತ್ಯ 400-450 ಸ್ಥಳೀಯ ಕಾರ್ಮಿಕರಿಗೆ ಉದ್ಯೋಗ ಸಿಕ್ಕಂತಾಗಿದೆ.
ಅದರಲ್ಲಿ ಬಹುತೇಕರು ಮಹಾರಾಷ್ಟ್ರ, ಗೋವಾ ಸೇರಿದಂತೆ ಅನೇಕ ರಾಜ್ಯಗಳಲ್ಲಿ ನಡೆಯುವ ರಸ್ತೆ ಕಾಮಗಾರಿ, ಕಟ್ಟಡ ಕಾಮಗಾರಿ ಕೆಲಸಕ್ಕೆ ಗುಳೆ ಹೋಗುತ್ತಿದ್ದರು. ಈ ಬಾರಿ ಕೊರೊನಾ ಹೊಡೆತದಿಂದ ಇವರೆಲ್ಲಾ ತಮ್ಮ ಗೂಡು ಸೇರಿಕೊಂಡಿದ್ದಾರೆ. ಸರ್ಕಾರ, ದಾನಿಗಳು ನೀಡುವ ಆಹಾರ ಕಿಟ್ ತೆಗೆದುಕೊಂಡು ಬದುಕು ಸಾಗಿಸುತ್ತಿದ್ದರು. ಈಗ ಕೆರೆ ಹೂಳೆತ್ತುವ ಕೆಲಸ ಸಿಕ್ಕಿದ್ದು, ಸ್ವಗ್ರಾಮದಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ.
ಗ್ರಾಮದಲ್ಲಿ 74.35 ಎಕರೆ ಹಾಗೂ 36 ಎಕರೆಯ ಎರಡು ಕೆರೆಗಳು ಹೊಳು ತುಂಬಿಕೊಂಡು ಹಾಳಾಗಿವೆ. ಅವುಗಳ ಹೊಳೆತ್ತಲು ಗ್ರಾಮ ಪಂಚಾಯಿತಿಯಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಕಾರ್ಮಿಕರಿಗೆ 100 ದಿನಗಳ ಕೂಲಿ ನೀಡಲಾಗುತ್ತಿದೆ. ಕಾರ್ಮಿಕರು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಕೂಲಿ ಕೆಲಸ ಮುಗಿಸಿಕೊಂಡು ತಮ್ಮ ಹೊಲ ಗದ್ದೆಗಳನ್ನು ನೋಡಬಹುದಾಗಿದೆ.
ಈ ಕಾಮಗಾರಿಗೆ ಕೆಲ ಸ್ಥಳೀಯ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಪ್ರತಿ ಕಾರ್ಮಿಕನಿಗೆ ನಿತ್ಯ ₹ 275, ಜೋಡಿ ದಂಪತಿಗೆ ₹ 550 ಕೂಲಿ ನೀಡಲಾಗುತ್ತಿದೆ. ಆದರೆ, ಈ ಹಣ ಸರಿಯಾಗಿ ಕಾರ್ಮಿಕರ ಖಾತೆಗೆ ಜಮೆ ಮಾಡುತ್ತಿಲ್ಲ. ಬೇಕಾಬಿಟ್ಟಿಯಾಗಿ ಕೂಲಿ ನೀಡಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಜೊತೆಗೆ ಉದ್ಯೋಗ ಖಾತ್ರಿ ಯೋಜನೆ ನಿಯಮ ಉಲ್ಲಂಘಿಸಲಾಗಿದೆ. ಜೆಸಿಬಿ ಯಂತ್ರ ಬಳಕೆ ಮಾಡಲಾಗಿದೆ ಎನ್ನುವ ಆರೋಪ ಸಹ ಇದೆ. ಏನೇ ಆಗಲಿ ಸರ್ಕಾರಿ ಯೋಜನೆ ಸಮರ್ಪಕವಾಗಿ ಜಾರಿಯಾಗುವುದು ಅಪರೂಪ. ಅಂಥದ್ರಲ್ಲಿ ಹೊನವಾಡ ಗ್ರಾ.ಪಂ.ಕಾಮಗಾರಿ ಕೈಗೆತ್ತಿಕೊಂಡಿರುವ ಕಾರ್ಯವನ್ನು ಸಾರ್ವಜನಿಕರು ಮೆಚ್ಚಿಕೊಂಡಿದ್ದಾರೆ.