ವಿಜಯಪುರ/ ಹುಬ್ಬಳ್ಳಿ: ಗುಮ್ಮಟನಗರಿ ವಿಜಯಪುರದಲ್ಲಿ ರಾತ್ರಿಯಿಡೀ ವರುಣದೇವ ಆರ್ಭಟ ತೋರಿದ್ದು, ಮಳೆಯಿಂದ ಜನ ಸಂಕಷ್ಟಕ್ಕೆ ಸಿಲುಕಿದೆ.
ವಿಜಯಪುರ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗುಡುಗು ಸಹಿತ ಮಳೆಯಾಗಿರುವ ಪರಿಣಾಮ ನಗರದ ಮೀನಾಕ್ಷಿ ವೃತ್ತ, ಕೆಸಿ ಮಾರ್ಕೆಟ್, ಬಸ್ ನಿಲ್ದಾಣಗಳು ಜಲಾವೃತಗಳಾಗಿವೆ. ಇನ್ನೂ ವಿಜಯಪುರ ನಗರದ ಐತಿಹಾಸಿಕ ಭೂತನಾಳ ಕೆರೆ ಮತ್ತು ಬೇಗಂ ತಲಾಬ್ ಗಳು ಈಗಾಗಲೇ ತುಂಬಿವೆ.
ಹುಬ್ಬಳ್ಳಿಯಲ್ಲಿ ಮತ್ತೆ ವರುಣನ ಆರ್ಭಟ:
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವರುಣನ ಆರ್ಭಟ ಮತ್ತೆ ಶುರುವಾಗಿದ್ದು, ಐದು ದಿನಗಳಿಂದ ಬಿಡುವು ನೀಡಿದ್ದ ಮಳೆ ಮತ್ತೆ ಅಬ್ಬರಿಸಿದ್ದರಿಂದ ಜನರು ಪರದಾಡುವಂತಾಯಿತು. ಧೋ ಎಂದು ಮಳೆ ಸುರಿದ ಪರಿಣಾಮ ನಗರದ ದಾಜೀಬಾನಪೇಟೆ, ಜನತಾ ಬಜಾರ್, ಹಳೇ ಹುಬ್ಬಳ್ಳಿಯ ಕೆಲ ರಸ್ತೆ ತುಂಬಾ ನೀರು ಹರಿದು ವಾಹನ ಸವಾರರು ಹಾಗೂ ಪಾದಚಾರಿಗಳು ಪರದಾಡುವಂತಾಯಿತು. ಇನ್ನು ತಗ್ಗುಪ್ರದೇಶದ ಮನೆಗಳು ಹಾಗೂ ಮಳಿಗೆಗಳಿಗೆ ನೀರು ನುಗ್ಗಿದ್ದು ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಮುಂದಿನ 48 ಗಂಟೆಗಳ ಕಾಲ ರಾಜ್ಯದಲ್ಲಿ ಭಾರೀ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿತ್ತು. ಅಲ್ಲದೇ ವಾಯುಭಾರ ಕುಸಿತದಿಂದ ಮಹಾ ಚಂಡಮಾರುತ ಕರಾವಳಿಗೆ ಅಪ್ಪಳಿಸಿರುವ ಪರಿಣಾಮ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಮಳೆಯಾಗೋ ಸಾಧ್ಯತೆಗಳಿವೆ. ಈಗಾಗಲೇ ಹೈರಾಣಾಗಿರುವ ಪ್ರವಾಹ ಸಂತ್ರಸ್ತರನ್ನು ಮಳೆ ಮತ್ತಷ್ಟು ಆತಂಕಕ್ಕೆ ಸಿಲುಕಿಸಿದೆ.