ವಿಜಯಪುರ: ಮಳೆಯಿಂದಾಗಿ ಭೀಮಾ ನದಿ ಅಬ್ಬರಿಸಿದ ಹಿನ್ನೆಲೆ ಹಳ್ಳಿ ಹಳ್ಳಿಗಳಲ್ಲಿ ಜಿಲ್ಲಾಡಳಿತ ಡಂಗೂರ ಸಾರುತ್ತಿದ್ದು, ಜನ, ಜಾನುವಾರು ಭೀಮಾ ನದಿ ತೀರಕ್ಕೆ ಹೋಗದಂತೆ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದೆ.
ಉಜನಿ ಜಲಾಶಯದಿಂದ ಭೀಮಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗಿದೆ. ಭೀಮಾ ನದಿ ತೀರದ ಗ್ರಾಮಸ್ಥರಿಗೆ ಗ್ರಾಮ ಪಂಚಾಯಿತಿಗಳಿಂದ ಕಟ್ಟೆಚ್ಚರ ನೀಡಲಾಗಿದೆ. ವಿಜಯಪುರ ಜಿಲ್ಲೆ ದೇವಣಗಾಂವ್, ಶಂಭೆವಾಡ, ಕಡ್ಲೆವಾಡ ಪಿಎ ಗ್ರಾಮಗಳಲ್ಲಿ ಡಂಗೂರದ ಮೂಲಕ ಕಟ್ಟೆಚ್ಚರ ವಹಿಸಲು ಗ್ರಾಮಸ್ಥರಿಗೆ ಮನವಿ ಮಾಡಲಾಗಿದೆ. ಭೀಮಾ ನದಿಗೆ 50 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.
![ಧಾರಾಕಾರ ಮಳೆಗೆ ಗೋಡೆ ಕುಸಿತವಾಗಿರುವುದು](https://etvbharatimages.akamaized.net/etvbharat/prod-images/kn-vjp-01-increased-rain-damage-av-ka10055_12092022151913_1209f_1662976153_604.jpg)
ನದಿ ತೀರದಿಂದ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಲಾಗಿದ್ದು, ನದಿ ದಡದಲ್ಲಿ ಅಳವಡಿಸಿದ್ದ ಪಂಪ್ಸೆಟ್, ವಿದ್ಯುತ್ ಉಪಕರಣಗಳನ್ನು ಮೇಲೆ ತೆಗೆದುಕೊಳ್ಳುವಂತೆ ರೈತರಿಗೆ ಸೂಚನೆ ನೀಡಿದ್ದು, ನದಿ ತೀರದ ಗ್ರಾಮದ ಜನತೆಯೊಂದಿಗೆ ಚರ್ಚಿಸಿ, ಮುನ್ನೆಚ್ಚರಿಕೆ ಕ್ರಮಗಳ ಕುರಿತು ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿ ತಿಳುವಳಿಕೆ ನೀಡುತ್ತಿದ್ದಾರೆ.
![ಮಹಾಮಳೆಗೆ ಗೋಡೆ ಕುಸಿತವಾಗಿರುವುದು](https://etvbharatimages.akamaized.net/etvbharat/prod-images/kn-vjp-01-increased-rain-damage-av-ka10055_12092022151913_1209f_1662976153_979.jpg)
ಕಳೆದ ನಾಲ್ಕು ದಿನಗಳಿಂದ ವಿಜಯಪುರ ನಗರ ಸೇರಿದಂತೆ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಸುಮಾರು 39 ಮನೆಗಳಿಗೆ ಹಾನಿಯಾಗಿದೆ. ನಿಡಗುಂದಿ 5, ತಾಳಿಕೋಟೆ 3, ಬಬಲೇಶ್ವರ 7, ಬಸವನಬಾಗೇವಾಡಿ 12, ತಿಕೋಟಾ 3, ದೇವರ ಹಿಪ್ಪರಗಿ 3, ಮುದ್ದೇಬಿಹಾಳ 4, ವಿಜಯಪುರ ತಾಲೂಕು 11 ಕಚ್ಚಾ ಮನೆಗಳು ಸೇರಿ 48 ಮನೆಗಳು ಹಾನಿಗೊಳಗಾಗಿವೆ. 143 ಮನೆಗಳಿಗೆ ನೀರು ನುಗ್ಗಿ ಆಹಾರ ಧಾನ್ಯ ಹಾಗೂ ಅಗತ್ಯ ಗೃಹಪಯೋಗಿ ವಸ್ತುಗಳು ಹಾಳಾಗಿವೆ.
![ಧಾರಾಕಾರ ಮಳೆಗೆ ಅನಾಹುತ ಸಂಭವಿಸಿರುವುದು](https://etvbharatimages.akamaized.net/etvbharat/prod-images/kn-vjp-01-increased-rain-damage-av-ka10055_12092022151913_1209f_1662976153_1066.jpg)
ಮಳೆಯಿಂದ ವಿಜಯಪುರ ನಗರದಲ್ಲಿ ಹಲವು ಅವಾಂತರಗಳು ಸೃಷ್ಠಿಯಾಗಿವೆ. ಕಳೆದ ನಾಲ್ಕು ದಿನಗಳಿಂದ ಸಂಜೆಯಾಗುತ್ತಲೇ ಮಳೆ ಬರುತ್ತಿದೆ. ಇನ್ನು, ಸಮಸ್ಯೆ ಗಮನಕ್ಕೆ ಬರುತ್ತಲೇ ಶಾಸಕ ದೇವಾನಂದ ಚವ್ಹಾಣ್ ಹಾಗೂ ಅಧಿಕಾರಿಗಳು ನಗರದ ಹಲವು ಸ್ಥಳಕ್ಕೆ ಸತತ ಎರಡು ದಿನಗಳ ಕಾಲ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಗರದ ವಾರ್ಡ್ ನಂಬರ್ 12 ಕಲ್ಯಾಣ ನಗರ, ಕಾವಿ ಪ್ಲಾಟ್ ಅಲ್ಲಾಪುರ ತಾಂಡಾ ಸೇರಿದಂತೆ ಹಲವು ಕಡೆ ಶಾಸಕ ದೇವಾನಂದ ಚವ್ಹಾಣ್ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸೋಮವಾರವೋ ಮಧ್ಯಾಹ್ನವೇ ಭಾರಿ ಮಳೆಯಾಗಿದೆ. ಇನ್ನೂ ಸೆಪ್ಟೆಂಬರ್ 17ರವರೆಗೆ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನಚ್ಚರಿಕೆ ನೀಡಿದೆ.
ಆಲಮಟ್ಟಿ ಜಲಾಶಯ ಪಾತ್ರದ ಜನರಿಗೂ ಎಚ್ಚರಿಕೆ: ಆಲಮಟ್ಟಿ ಜಲಾಶಯ ಸುತ್ತಮುತ್ತ ಹಾಗೂ ಮಹಾರಾಷ್ಟ್ರದಿಂದ ಹೆಚ್ಚುವರಿ ನೀರು ಹರಿದು ಬರುತ್ತಿರುವ ಕಾರಣ ಜಲಾಶಯದ ತಳಮಟ್ಟದ ಪ್ರದೇಶದಲ್ಲಿ ವಾಸವಿರುವ ಜನರಿಗೂ ನದಿ ಕಡೆ ತೆರಳದಂತೆ ಮುನ್ನಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಸದ್ಯ ಆಲಮಟ್ಟಿ ಜಲಾಶಯದ ಹೊರ ಹರಿವು ಬೆಳಗ್ಗೆ 52,500 ಕ್ಯೂಸೆಕ್ ಬಿಡಲಾಗುತ್ತಿತ್ತು. ಸದ್ಯ ಅದನ್ನು ಹೆಚ್ಚಳ ಮಾಡಲಾಗಿದ್ದು, 77,500 ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ. ಒಳಹರಿವು ಸಹ ಬೆಳಗ್ಗೆ 52,500 ಕ್ಯೂಸೆಕ್ ಹೆಚ್ಚಳವಾಗಿದೆ. ಸದ್ಯ ಆಲಮಟ್ಟಿ ಜಲಾಶಯ 519.58 ಮೀಟರ್ ಇದ್ದು, ಜಲಾಶಯದಲ್ಲಿ 122.669 ಟಿಎಂಸಿ ನೀರು ಸಂಗ್ರಹವಿದೆ.
ಓದಿ: ಪಶ್ಚಿಮಘಟ್ಟ ಪ್ರದೇಶದಲ್ಲಿ ಭಾರಿ ಮಳೆ : ಬೆಳಗಾವಿಯಲ್ಲಿ 17ಸೇತುವೆಗಳು, 35 ಅಧಿಕ ಮನೆಗಳ ಕುಸಿತ