ವಿಜಯಪುರ: ಜಿಲ್ಲೆಯಲ್ಲಿ ಕಳೆದ 24ಗಂಟೆಯಲ್ಲಿ 30.8 ಮಿ.ಮೀಟರ್ ದಾಖಲೆ ಪ್ರಮಾಣದಲ್ಲಿ ಮಳೆಯಾಗಿದೆ.
ಸಿಂದಗಿ ತಾಲೂಕಿನ ಸಾಸಬಾಳ ಗ್ರಾಮದಲ್ಲಿ 100 ಮಿ.ಮೀ, ದೇವರ ಹಿಪ್ಪರಗಿ ತಾಲೂಕಿನ ಕೊಂಡಗೊಳಿಯಲ್ಲಿ 88.20 ಮಿ.ಮೀ ಮಳೆಯಾಗಿದ್ದು, ಮುಂದಿನ ಎರಡು ದಿನಗಳ ಕಾಲ ಅಧಿಕ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ವಾಡಿಕೆಯಂತೆ ಅ.13-14ರಂದು 18 ಮಿ.ಮೀ. ಮಳೆಯಾಗಬೇಕಾಗಿತ್ತು. ಆದರೆ ಮಹಾಮಳೆಯಿಂದ ಶೇ. 409ರಷ್ಟು ಮಳೆಯಾಗಿದೆ. ಈವರೆಗೆ 315 ಮನೆಗಳಿಗೆ ಹಾನಿಯಾಗಿದೆ. 2 ಜಾನುವಾರುಗಳು ಮಳೆಯಲ್ಲಿ ಸಾವನ್ನಪ್ಪಿವೆ.
ಸಾರ್ವಜನಿಕರ ಅನುಕೂಲಕ್ಕಾಗಿ ಸಿಂದಗಿ ತಾಲೂಕಿನ ಮೊರಟಗಿಯಲ್ಲಿ ಜಿಲ್ಲಾಡಳಿತ ಕಾಳಜಿ ಕೇಂದ್ರ ಆರಂಭಿಸಿದೆ. ಸದ್ಯ ಇದರಲ್ಲಿ 25 ಜನ ಆಶ್ರಯ ಪಡೆದುಕೊಂಡಿದ್ದಾರೆ. ನದಿಪಾತ್ರ ಹಾಗೂ ಜಿಲ್ಲೆಯ ಜನತೆಯ ಅನುಕೂಲಕ್ಕಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಹಾಯವಾಣಿ ಆರಂಭಿಸಲಾಗಿದೆ. ಟೋಲ್ ಫ್ರೀ ನಂ 1077 ಇಲ್ಲವೇ ದೂರವಾಣಿ ಸಂಖ್ಯೆ 08352-221261ಗೆ ಕರೆ ಮಾಡಬಹುದಾಗಿದೆ.
ಆಲಮಟ್ಟಿ ಜಲಾಶಯಕ್ಕೆ ಹೆಚ್ಚುವರಿ ನೀರು: ಜಿಲ್ಲೆಯ ಜೀವನಾಡಿ ಆಲಮಟ್ಟಿ ಜಲಾಶಯಕ್ಕೆ 1.75ಲಕ್ಷ ಕ್ಯೂಸೆಕ್ ನೀರು ಹರಿದು ಬಂದಿದ್ದು, ಅದೇ ಪ್ರಮಾಣದಲ್ಲಿ 1.75ಲಕ್ಷ ಕ್ಯೂಸೆಕ್ ನೀರು ನಾರಾಯಣಪುರ ಜಲಾಶಯಕ್ಕೆ ಬಿಡಲಾಗುತ್ತಿದೆ. ಕಲಬುರಗಿ ಜಿಲ್ಲೆಯ ಸೊನ್ನ ಬ್ಯಾರೇಜ್ಗೆ ಮಹಾರಾಷ್ಟ್ರದ ವೀರಾ ಜಲಾಶಯದಿಂದ 0.53 ಸಾವಿರ ಕ್ಯೂಸೆಕ್ ನೀರು ಹರಿದು ಬಂದಿದೆ. ಸೊನ್ನ ಬ್ಯಾರೇಜ್ನಿಂದ 0.65 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಇನ್ನೂ ಡೋಣಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ವಿಜಯಪುರ, ಬಬಲೇಶ್ವರ, ನಿಡಗುಂದಿ, ಕೊಲ್ಹಾರ, ತಾಳಿಕೋಟೆ, ಬಸವನಬಾಗೇವಾಡಿ, ದೇವರ ಹಿಪ್ಪರಗಿ, ಇಂಡಿ ಹಾಗೂ ಸಿಂದಗಿ ತಾಲೂಕುಗಳನ್ನು ಪ್ರವಾಹ ಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ.