ವಿಜಯಪುರ: ಜಿಲ್ಲೆಯಲ್ಲಿ ಬಿಟ್ಟು ಬಿಡದೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಭೀಮಾ ತೀರದ 8 ಬ್ಯಾರೇಜ್ ಗಳು ಜಲಾವೃತವಾಗಿವೆ. ಪರಿಣಾಮ ಮಹಾರಾಷ್ಟ್ರ ಹಾಗೂ ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಕಡಿತವಾಗಿದೆ. ಇದು ಪ್ರತಿ ವರ್ಷ ನಡೆಯುತ್ತಲೇ ಇದ್ದರೂ ಶಾಶ್ವತವಾಗಿ ಎತ್ತರದ ಸೇತುವೆ ನಿರ್ಮಾಣ ಮಾಡಬೇಕೆನ್ನುವ ದಶಕಗಳ ಬೇಡಿಕೆ ಮಾತ್ರ ಇನ್ನೂ ಸಾಕಾರಗೊಂಡಿಲ್ಲ.
ಗಡಿ ವಿಚಾರವಾಗಿ ಕರ್ನಾಟಕ- ಮಹಾರಾಷ್ಟ್ರ ನಡುವೆ ಆಗಾಗ್ಗೆ ತಂಟೆ ತಕರಾರುಗಳು ನಡೆಯುತ್ತಲೇ ಇರುತ್ತವೆ. ಅಲ್ಲದೇ, ಇವೆರೆಡು ರಾಜ್ಯಗಳ ನಡುವೆ ವಾಣಿಜ್ಯ ವ್ಯವಹಾರ ಹೆಚ್ಚಾಗಿ ನಡೆಯುತ್ತಿರುವ ಕಾರಣ ಹಲವಾರು ಚಿಕ್ಕ ಸೇತುವೆಗಳು ಸಂಚಾರಕ್ಕೆ ಅತ್ಯವಶ್ಯಕವಾಗಿದೆ. ಆದರೆ ಪ್ರತಿ ವರ್ಷ ಭೀಮಾ ನದಿಗೆ ಪ್ರವಾಹ ಎದುರಾದಾಗ ಸಂಪರ್ಕ ಸೇತುವೆ ಸ್ಥಗಿತವಾಗಿ ವ್ಯಾಪಾರ ವಹಿವಾಟಿಗೆ ತೊಂದರೆಯಾಗುತ್ತದೆ. ಹೀಗಾಗಿ ಈ ಭಾಗದ ಸೇತುವೆಗಳ ಎತ್ತರ ಹೆಚ್ಚಿಸಿದರೆ ಎರಡು ರಾಜ್ಯದ ಜನತೆಗೆ ಅನುಕೂಲವಾಗುತ್ತದೆ ಎಂಬುದು ಇಲ್ಲಿನ ಗ್ರಾಮಸ್ಥರ ಬೇಡಿಕೆಯಾಗಿದೆ.
ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಉಮರಾಣಿ-ಲವಗಿ, ದಸೂರ, ಧೂಳಖೇಡ, ಹಿಂಗಣಿ, ಭಂಡಾರಕೋಟೆ ಸೇರಿದಂತೆ ಒಟ್ಟು 8 ಬ್ಯಾರೇಜ್ ಸಂಪೂರ್ಣ ಜಲಾವೃತವಾಗಿದೆ. ಇದು ವ್ಯಾಪಾರಸ್ಥರಿಗೆ ಸಂಕಷ್ಟವನ್ನು ತಂದೊಡ್ಡಿದ್ದರೆ, ಕೆಲವರಿಗೆ ಅವ್ಯವಹಾರಕ್ಕೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಅಲ್ಲದೇ, ರೈತರ ಮೋಟಾರ್ ಕಳ್ಳತನವೂ ಹೆಚ್ಚಾಗುತ್ತದೆ. ಕೆಲವರು ಹೆಣಗಳನ್ನು ಎಸೆದು ಹೋಗಿರುವ ಪ್ರಕರಣಗಳು ಸಹ ಪತ್ತೆಯಾಗಿವೆ ಎನ್ನುತ್ತಾರೆ ಇಲ್ಲಿನ ಗ್ರಾಮಸ್ಥರು.
ಇನ್ನಿತರ ಅಪರಾಧ ಪ್ರಕರಣದ ಸಾಕ್ಷ್ಯಗಳನ್ನು ನೀರಿಗೆ ಎಸೆದು ಅಪರಾಧ ಮುಚ್ಚಿ ಹಾಕುತ್ತಿರುವುದು ಈ ಭಾಗದ ಪೊಲೀಸರಿಗೆ ದೊಡ್ಡ ತಲೆನೋವಾಗಿದೆ ಪರಿಣಮಿಸಿದೆ. ಹೀಗಾಗಿ ಇನ್ನಾದರೂ ಗಡಿಭಾಗದ ಜನರ ಬಹುದಿನದ ಬೇಡಿಕೆಯಾಗಿರುವ ಸೇತುವೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಬೇಕಾಗಿದೆ ಎಂಬುದು ಸ್ಥಳೀಯರ ಒತ್ತಾಯವಾಗಿದೆ.