ವಿಜಯಪುರ: ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ವಿಜಯಪುರ ನಗರ ತತ್ತರಿಸಿ ಹೋಗಿದೆ. ನಗರದ ಹಲವು ಬಡಾವಣೆಗಳಲ್ಲಿ ನೀರು ನುಗ್ಗಿದ್ದು ರಾತ್ರಿ ಇಡೀ ಜನ ಪರದಾಡುವಂತಾಗಿದೆ. ಬಾಗವಾನನಗರ, ಬಬಲೇಶ್ವರ ನಾಕಾ, ಬಸ್ ನಿಲ್ದಾಣ ಉಪಲಬುರುಜ್ ಸೇರಿ ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ.
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸತತ ಮಳೆಯಾಗುತ್ತಿದೆ. ನಗರ ಸೇರಿ ಜಿಲ್ಲಾದ್ಯಂತ ಮಳೆಯ ಆರ್ಭಟ ಜೋರಾಗಿದ್ದು ಜನ ಹೈರಾಣಾಗಿದ್ದಾರೆ. ನಗರದ ಬಬಲೇಶ್ವರ ನಾಕಾ ಬಳಿಯ ಹಳೆಯ ಬಾಗವಾನ ಬಡಾವಣೆ ಸೇರಿ ಸುತ್ತಮುತ್ತಲಿನ ಬಡಾವಣೆಗಳಿಗೆ ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ನೀರು ನುಗ್ಗಿ ನಡುಗಡ್ಡೆಯಂತಾಗಿದ್ದು, ಮನೆಯಲ್ಲಿರುವ ಜನರು ಹೊರಗೆ ಬರದಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ಹಲವು ವರ್ಷಗಳಿಗೆ ಈ ಬಡಾವಣೆ ಮಳೆಗೆ ತುತ್ತಾಗುತ್ತಲೇ ಇದೆ. ಅಥಣಿ ರಸ್ತೆ, ಬಸ್ ನಿಲ್ದಾಣ ರಸ್ತೆಗಳಿಗೆ ಕೊಂಡಿಯಾಗಿರುವ ಈ ಬಡಾವಣೆಯ ಮುಖ್ಯ ರಸ್ತೆಯಿಂದ ಸ್ವಲ್ಪ ತಗ್ಗು ಪ್ರದೇಶದಲ್ಲಿ ನಿರ್ಮಾಣವಾಗಿರುವ ಕಾರಣ ಮಳೆ ಬಂದರೆ ಸಾಕು ನಡುಗಡ್ಡೆಯಾಗಿ ಪರಿವರ್ತನೆಯಾಗುತ್ತಿದೆ. ಇದರಿಂದ ಜನ ಬೇಸತ್ತು ಹೋಗಿದ್ದಾರೆ.
ಇನ್ನು, ಕಳೆದ ರಾತ್ರಿ ಸುರಿದ ಮಳೆಗೆ ಜನ ಭಯಭೀತರಾಗಿದ್ದಾರೆ. ಮನೆಗಳಿಗೆ ನೀರು ನುಗ್ಗಿರುವ ಕಾರಣ ಸುತ್ತಮುತ್ತಲಿನ ದೇವಸ್ಥಾನದಲ್ಲಿ ಆಶ್ರಯ ಪಡೆಯುವಂತಾಗಿದೆ. ಮನೆಯಲ್ಲಿದ್ದ ದವಸ ಧಾನ್ಯಗಳು ನೀರುಪಾಲಾಗಿವೆ. ಮಹಿಳೆಯರು, ಮಕ್ಕಳು ಬೀದಿಪಾಲಾಗಿದ್ದು ಅವರ ರೋಧನೆ ಮುಗಿಲು ಮುಟ್ಟಿತ್ತು.
ಹಲವು ವರ್ಷಗಳಿಂದ ಮಳೆ ಬಂದಾಗೊಮ್ಮೆ ಇದೇ ಪರಿಸ್ಥತಿ ನಿರ್ಮಾಣವಾಗುತ್ತದೆ. ಇದರಿಂದ ಬೇಸತ್ತ ಸ್ಥಳೀಯರು ಮಹಾನಗರಪಾಲಿಕೆ ವಿರುದ್ದ ಹಿಡಿಶಾಪ ಹಾಕುವಂತಾಗಿದೆ. ಈಗಲಾದರೂ ಮಹಾನಗರ ಪಾಲಿಕೆ ಈ ಬಡಾವಣೆಯಲ್ಲಿ ನೀರು ನಿಲ್ಲದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.