ಮುದ್ದೇಬಿಹಾಳ : ತಾಲೂಕಿನಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಒಂದಿಲ್ಲೊಂದು ಅನಾಹುತ ನಡೆಯುತ್ತಿವೆ. ತಾಲೂಕಿನ ಚವನಬಾವಿಯಲ್ಲಿ ಮನೆ ಕುಸಿದು ಬಿದ್ದಿದ್ದ ಗೋಡೆಯ ಅವಶೇಷಗಳ ಮಧ್ಯೆ ಸಿಕ್ಕಿ ಹಾಕಿಕೊಂಡಿದ್ದ ವೃದ್ಧ ದಂಪತಿಯನ್ನ ಗ್ರಾಮಸ್ಥರು ರಕ್ಷಿಸಿದ ಘಟನೆ ನಡೆದಿದೆ.
ಚವನಬಾವಿ ಗ್ರಾಮದ ಗದ್ದೆಪ್ಪ ಸಿದ್ದಪ್ಪ ವಾಲೀಕಾರ್, ಬಣ್ಣೆಮ್ಮ ವಾಲೀಕಾರ್ ದಂಪತಿ ಬೆಳಗಿನ ಜಾವ ಮನೆ ಕುಸಿದಿದ್ದರಿಂದ ಅವಶೇಷಗಳ ಅಡಿ ಸಿಲುಕಿದ್ದರು. ಅದರಲ್ಲಿ ಗದ್ದೆಪ್ಪನ ಕೈಗೆ ಪೆಟ್ಟಾಗಿದೆ. ಬಣ್ಣೆಮ್ಮಳಿಗೂ ಗಾಯಗಳಾಗಿವೆ. ತಾಲೂಕಿನ ನಾಲತವಾಡ ಪಟ್ಟಣದಲ್ಲಿ ಬೃಹತ್ ಮರವೊಂದು ರಸ್ತೆಯ ಮೇಲೆಯೇ ಉರುಳಿದಿದೆ. ನಾಲತವಾಡ ಪಟ್ಟಣದಿಂದ ಮುದ್ದೇಬಿಹಾಳ ನಗರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ಬೃಹತ್ ಬೇವಿನ ಮರವೊಂದು ಧರೆಗುರುಳಿತು.
ಅದೃಷ್ಟವಶಾತ್ ಮರ ಬೀಳುವ ಸಂದರ್ಭದಲ್ಲಿ ಪ್ರಯಾಣಿಕರು ಹಾಗೂ ಸವಾರರು ಅನಾಹುತದಿಂದ ಪಾರಾಗಿದ್ದಾರೆ. ಮರ ಉರುಳುತ್ತಿರುವುದನ್ನು ಗಮನಿಸಿದ ಸ್ಥಳೀಯರು ವಾಹನ ಹೋಗದಂತೆ ರಸ್ತೆಯಲ್ಲಿ ಸಂಚಾರ ಬಂದ್ ಮಾಡಿದ್ದ ಪರಿಣಾಮ ಯಾವುದೇ ಅನಾಹುತ ಸಂಭವಿಸಿಲ್ಲ. ವಿದ್ಯುತ್ ತಂತಿ ಮೇಲೆಯೇ ಮರ ಬಿದ್ದ ಕಾರಣ ವಿದ್ಯುತ್ ತಂತಿ ತುಂಡರಿಸಿದೆ. ಹೆಸ್ಕಾಂ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ವಿದ್ಯುತ್ ಅವಘಡ ಸಂಭವಿಸಿಲ್ಲ.
ಸಂಚಾರ ಸ್ಥಗಿತ : ಮುದ್ದೇಬಿಹಾಳದಿಂದ ರಾಯಚೂರು, ಯಾದಗಿರಿಗೆ ಹೋಗುವ ಮಾರ್ಗ ಇದಾಗಿದ್ದರಿಂದ ರಸ್ತೆಯಲ್ಲಿ ಮರ ಉರುಳಿದ ಪರಿಣಾಮ ಕೆಲ ಕಾಲ ರಸ್ತೆ ಸಂಚಾರ ಅಸ್ತವ್ಯಸ್ತವಾಯಿತು. ಕೂಡಲೇ ಸ್ಥಳಕ್ಕಾಗಮಿಸಿದ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಎಂ ಆರ್ ದಾಯಿ ಜೆಸಿಬಿ ತರಿಸಿ ಮರವನ್ನ ರಸ್ತೆಯಿಂದ ತೆರವುಗೊಳಿಸಿದರು.