ಮುದ್ದೇಬಿಹಾಳ: ನಿನ್ನೆ ಸುರಿದ ಧಾರಾಕಾರ ಮಳೆಯಿಂದಾಗಿ ತಾಲೂಕಿನಾದ್ಯಂತ ಹಲವೆಡೆ ಹೊಲಗಳ ಒಡ್ಡುಗಳು ಒಡೆದು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ತಾಲೂಕಿನ ನಾಲತವಾಡ-ತಾಳಿಕೋಟಿ ಮಾರ್ಗದ ಮಧ್ಯೆ ಬರುವ ಚವನಬಾವಿ ಗ್ರಾಮದ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆಗೆ ತೆರಳಲು ಅಡ್ಡಿಯಾಗಿದ್ದ ಹಳ್ಳದ ನೀರಿನಲ್ಲಿ ರೈತರು, ವಿದ್ಯಾರ್ಥಿಗಳ ಕೈ ಹಿಡಿದು ದಾಟಿಸಿದ ಘಟನೆ ನಡೆದಿದೆ.
ತಾಲೂಕಿನ ನಾಗರಬೆಟ್ಟದ ಪರೀಕ್ಷಾ ಕೇಂದ್ರಕ್ಕೆ ಇಬ್ಬರು ವಿದ್ಯಾರ್ಥಿಗಳು ಪರೀಕ್ಷೆಗೆ ಹೋಗಬೇಕಿತ್ತು. ಆದರೆ ಇಂದು ದಿಢೀರ್ ಹಳ್ಳ ತುಂಬಿ ಬಂದಿದ್ದರಿಂದ ದಾಟುವುದು ಹೇಗೆ ಎಂಬ ಆತಂಕದಲ್ಲಿ ವಿದ್ಯಾರ್ಥಿಗಳು ನಿಂತುಕೊಂಡಿದ್ದರು. ವಿದ್ಯಾರ್ಥಿಗಳಿಗೆ ಧೈರ್ಯ ಹೇಳಿದ ಗ್ರಾಮಸ್ಥರು, ಪ್ರವಾಹದಲ್ಲಿಯೇ ಅವರನ್ನು ದಡ ಸೇರಿಸಿದ್ದಾರೆ. ಅಲ್ಲದೆ ಹೊಲ ಗದ್ದೆಗಳಿಗೆ ದುಡಿಯಲು ಹೋಗುವ ರೈತರು ಒಬ್ಬರಿಗೊಬ್ಬರು ಕೈ ಹಿಡಿದುಕೊಂಡು ದಡ ಮುಟ್ಟಿದ್ದಾರೆ.
ಚವನಬಾವಿಯಲ್ಲಿ ಹುಲಗಪ್ಪ ನಾಲತವಾಡ, ಲಕ್ಷ್ಮಣ ನಾಲತವಾಡ ಎಂಬುವರಿಗೆ ಸೇರಿದ ಎರಡು ಬಣವೆಗಳು ಹಳ್ಳದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಲಾಲಸಾಬ್ ಮುಲ್ಲಾ ಎಂಬುವರ ಕೋಳಿ ಫಾರಂನಲ್ಲಿದ್ದ 10ಕ್ಕೂ ಹೆಚ್ಚು ಕೋಳಿಗಳು ನೀರುಪಾಲಾಗಿವೆ.
ಸೇತುವೆ ಮೇಲ್ದರ್ಜೆಗೇರಿಸಲು ಒತ್ತಾಯ: ಪ್ರತಿ ಸಲ ಮಳೆಯಾದಗಲೊಮ್ಮೆ ಚವನಬಾವಿ ಗ್ರಾಮದ ಸೇತುವೆ ಹಾಗೂ ಅಡವಿ ಹುಲಗಬಾಳ ಗ್ರಾಮದಿಂದ ಅ.ಹುಲಗಬಾಳ ತಾಂಡಾದ ಸೇತುವೆ ಜಲಾವೃತಗೊಂಡು ರಸ್ತೆ ಸಂಪರ್ಕ ಕಡಿತಗೊಳ್ಳುತ್ತದೆ.
ರೈತರು, ವಿದ್ಯಾರ್ಥಿಗಳು ಪಟ್ಟಣ ಪ್ರದೇಶಗಳು, ಹೊಲಗಳಿಗೆ ತೆರಳಲು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಎರಡೂ ಸೇತುವೆಗಳನ್ನು ಮೇಲ್ದರ್ಜೆಗೇರಿಸಲು ಸರ್ಕಾರದ ಮೇಲೆ ಒತ್ತಡ ಹಾಕಿ ಅಭಿವೃದ್ಧಿಪಡಿಸಬೇಕು ಎಂದು ಗ್ರಾಮಸ್ಥರಾದ ಹಣಮಂತ ಪೂಜಾರಿ, ನಾಗರಾಜ ನೆಲವಾಸಿ, ಹುಲಗಪ್ಪ ಗಾಂಜಿ ಒತ್ತಾಯಿಸಿದ್ದಾರೆ.
ಮನೆಗಳಿಗೆ ನುಗ್ಗಿದ ನೀರು: ನಾಲತವಾಡದಲ್ಲಿ ಮಳೆ ಅಬ್ಬರದಿಂದಾಗಿ ನೀರು ಎರಡ್ಮೂರು ವಾರ್ಡ್ಗಳಿಗೆ ನುಗ್ಗಿದೆ. ನಾಲತವಾಡ ಪಟ್ಟಣ ಪ್ರದೇಶದಲ್ಲಿ ತಗ್ಗು ಪ್ರದೇಶದಲ್ಲಿರುವ ಖಾನಬಾವಿ ಓಣಿ, ಗಚ್ಚಿನಬಾವಿ ಓಣಿಯೊಳಗಡೆ ಕೆಲವು ಮನೆಗಳಿಗೆ ನೀರು ನುಗ್ಗಿದೆ. ಇದರಿಂದ ನಿವಾಸಿಗಳು ತೊಂದರೆಗೊಳಗಾಗಿದೆ. ಸರ್ಕಾರ ಪರಿಹಾರ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.