ವಿಜಯಪುರ: ಜೀವನದಲ್ಲಿ ಹಂತ ಹಂತವಾಗಿ ಕಷ್ಟಪಟ್ಟು ಮೇಲೆ ಬಂದಿದ್ದೇನೆ. ಯಾರಿಗೂ ನಾನು ದ್ರೋಹ ಮಾಡಿಲ್ಲ. ನನಗೆ ದೇವರ ಮೇಲೆ ಭಕ್ತಿ ಇದೆ. ಅದಕ್ಕೆ ಅನುಗುಣವಾಗಿ ನಡೆದುಕೊಂಡು ಬಂದಿದ್ದೇನೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ನನ್ನ ಜೊತೆ ಬಹಳ ಸ್ನೇಹಿತರು ಇದ್ದರು, ಅವರೆಲ್ಲ ಬಿಟ್ಟು ಹೋಗಿದ್ದಾರೆ. ನಾನು ಲಿಂಗಾಯತರ ವಿರೋಧಿ, ಉತ್ತರ ಕರ್ನಾಟಕದ ವಿರೋಧಿ ಎಂದೆಲ್ಲ ಅಪಪ್ರಚಾರ ಮಾಡಿದ್ದಾರೆ. ಅಪಪ್ರಚಾರ ಮಾಡಿದವರಲ್ಲಿ ಕೆಲವರು ಹೋದ್ರು, ಕೆಲವರು ಬದುಕಿದ್ದಾರೆ. ನಾನು ಅವರ ಬಗ್ಗೆ ಮಾತಾಡೋದಿಲ್ಲ. ಯಾರ ಬಗ್ಗೆ ಚರ್ಚೆಯೂ ಮಾಡಲ್ಲ ಎಂದರು.
ಈ ಭಾಗ ಐವತ್ತು ವರ್ಷದ ಹಿಂದೆ ಹೇಗಿತ್ತು ಎಂಬುದು ನನಗೆ ಗೊತ್ತು. ನಾನು ಎರಡು ಬಾರಿ ಮಂತ್ರಿಯಾಗಿ ರಾಜೀನಾಮೆ ಕೊಟ್ಟೆ. ಬೆಳಗಾವಿಯಿಂದ ಹಿಡಿದು ಬೀದರ್ ವರೆಗೂ ನಾನಾ ನೀರಾವರಿ ಯೋಜನೆಗಳನ್ನು ನನ್ನ ಅಧಿಕಾರಾವಧಿಯಲ್ಲಿ ಜಾರಿಗೆ ತಂದಿದ್ದೇನೆ ಎಂದು ಹೇಳಿದರು.
ಯಾವ ಸಮುದಾಯಕ್ಕೆ ನಾನು ಅನ್ಯಾಯ ಮಾಡಿಲ್ಲ:
ಹೊಟ್ಟೆಗೆ ಅನ್ನವಿಲ್ಲದೆ ಜನ್ರು ಕೂಲಿಗೆ ಹೋಗುತ್ತಿದ್ದರು. ವಾರಕ್ಕೊಮ್ಮೆ ಸ್ನಾನ ಮಾಡ್ತಿದ್ರೋ ಏನೋ ಗೊತ್ತಿಲ್ಲ. ಅಂತಹ ಕೆಟ್ಟ ಸ್ಥಿತಿ ಇತ್ತು. ಹಾಗಾಗಿ ಈ ಭಾಗಕ್ಕೆ ಯೋಜನಗಳನ್ನು ತಂದಿದ್ದೇನೆ. ಆ ಭಾಗ ಎಂದು ಪಾಪದ ಹೊರೆ ಹೊತ್ಕೊಂಡು ಹೊಗೋಕೆ ನಾನು ತಯಾರಿಲ್ಲ. ಯಾರು ಏನು ಬೇಕಾದರೂ ಮಾತಾಡಿಕೊಳ್ಳಿ, ನಾನು ಯಾವ ಸಮಾಜಕ್ಕೆ ಅನ್ಯಾಯ ಮಾಡಿದ್ದೇನೆ ಹೇಳಿ ಎಂದು ಪ್ರಶ್ನಿಸಿದರು.
ಕುರುಬರಿಗಾ, ಮುಸ್ಲಿಮರಿಗಾ, ಹರಿಜನರಿಗಾ, ಗಿರಿಜನರಿಗಾ, ನಾಯಕ ಸಮುದಾಯಕ್ಕಾ? ಯಾರಿಗೆ ಅನ್ಯಾಯ ಮಾಡಿದ್ದೇನೆ? ಹೇಳಿ, ನಾನು ಮುಸ್ಲಿಮರನ್ನು ಎರಡು ಬಾರಿ ಅಧ್ಯಕ್ಷರನ್ನಾಗಿಸಿದ್ದೇನೆ. ಏಳು ಜನರಿಗೆ ಅಧಿಕಾರ ಕೊಟ್ಟಿದ್ದೇನೆ, ದಯಮಾಡಿ ಯಾರೂ ತಪ್ಪು ತಿಳಿದುಕೊಳ್ಳೋ ಅವಶ್ಯಕತೆ ಇಲ್ಲ ಎಂದರು.
ಜಮೀರ್‌ಗೆ ಟಾಂಗ್: ಪಾಪ ಅವರವರಿಗೆ ಏನೋ ಆಸೆ ಬಂದಿರುತ್ತೆ. ಮಂತ್ರಿ, ಮುಖ್ಯಮಂತ್ರಿ ಆಗುವ ಆಸೆ ಅವರಿಗೂ ಇರುತ್ತೆ. ಅವರು ಏನೇನು ಆಗಬೇಕು ಅನ್ಕೊಂಡಿದಾರೋ ಅದು ಆಗಲ್ಲ ಎಂದು ಪರೋಕ್ಷವಾಗಿ ಜಮೀರ್‌ಗೆ ಟಾಂಗ್ ನೀಡಿದರು.
ಪ್ರವಾಸ ಮಾಡುತ್ತೇನೆ: ಚುನಾವಣಾ ಫಲಿತಾಂಶ ಏನೇ ಬರಲಿ, ನಾನು ಮತ್ತೆ ಈ ಭಾಗದಿಂದಲೇ ಪ್ರವಾಸ ಶುರು ಮಾಡುತ್ತೇನೆ. ಈ ಆರೇಳು ಜಿಲ್ಲೆಗಳಿಗೆ ನಾನು ಏನು ಮಾಡಿದ್ದೇನೆ ಎಂಬುದನ್ನು ಜನಗಳ ಮುಂದೆ ಹೇಳಿ, ಅವರ ಮನಸಲ್ಲಿರುವ ತಪ್ಪು ತಿಳುವಳಿಕೆ ಹೋಗಲಾಡಿಸುತ್ತೇನೆ.
ನನ್ನ ಮೇಲೆ ತಪ್ಪು ತಿಳಿವಳಿಕೆ ಬರುವಂತೆ ಮಾಡಿದವರ ಹೆಸರನ್ನೂ ಹೇಳುತ್ತೇನೆ ಎಂದು ತಿಳಿಸಿದರು. ಅಲ್ಲದೇ, ಇಂದಿರಾ ಗಾಂಧಿಯನ್ನು ಬಂಗಾರದಲ್ಲಿ ಕೂರಿಸಿದರಲ್ಲಾ ಅವರು ಈ ಭಾಗಕ್ಕೆ ಏನು ಕೊಟ್ರು? ಎಂದು ಪ್ರಶ್ನಿಸಿದರು.