ಮುದ್ದೇಬಿಹಾಳ : ವರನೊಬ್ಬ ಮದುವೆ ಮಂಟಪದಿಂದ ಆಗಮಿಸಿ ಗ್ರಾಮ ಪಂಚಾಯತ್ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿರುವ ಘಟನೆ ನಡೆದಿದೆ.
ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾ.ಪಂಗೆ ಗ್ರಾಮದ ನಿವಾಸಿ ಮಕ್ಬುಲ್ ಬನ್ನೆಟ್ಟಿ ಎಂಬುವರು ನಾಮಪತ್ರ ಸಲ್ಲಿಸಿದ್ದಾರೆ. ಆದರೆ, ಇಲ್ಲಿ ವಿಶೇಷ ಅಂದರೆ, ಇಂದು ಮಕ್ಬುಲ್ ಬನ್ನೆಟ್ಟಿ ಅವರ ಮದುವೆ ಇತ್ತು. ಮಧ್ಯಾಹ್ನ 2.55ಕ್ಕೆ ಬಿದರಕುಂದಿ ಗ್ರಾಪಂ ಕಚೇರಿಗೆ ಆಗಮಿಸಿದ ಅವರು ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾನೊಬ್ಬ ವೃತ್ತಿಯಲ್ಲಿ ಪತ್ರಕರ್ತನಾಗಿದ್ದು ಗ್ರಾಮದಲ್ಲಿರುವ ಸಮಸ್ಯೆಗಳ ಬಗ್ಗೆ ಅರಿವಿದೆ. ಸಮಸ್ಯೆಗಳ ಸುಧಾರಣೆಗೆ ಪ್ರಾಮಾಣಿಕವಾಗಿ ದುಡಿಯಲು ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಮತದಾರ ಬಾಂಧವರು ಆಶೀರ್ವಾದ ಮಾಡುವ ವಿಶ್ವಾಸ ಹೊಂದಿದ್ದೇನೆ ಎಂದು ಹೇಳಿದರು.
ಓದಿ: ವಿದೇಶಿ ಉದ್ಯೋಗಕ್ಕೆ ಗುಡ್‌ಬೈ; ತಾಯ್ನೆಲದೊಳಗೇ ಕೃಷಿ ಮಾಡಿ ಗೆದ್ದವನ ಯಶೋಗಾಥೆ
ನಾಮಪತ್ರ ಸಲ್ಲಿಕೆಗೆ ಅವಕಾಶ ಮಾಡಿಕೊಡದ ಆಕಾಂಕ್ಷಿಗಳು:
ಇನ್ನು ಮದುವೆ ಮಂಟಪದಿಂದ ನಾಮಪತ್ರ ಸಲ್ಲಿಸಲು ಆಗಮಿಸಿದ್ದ ವರ ಮಕ್ಬುಲ್ ಬನ್ನೆಟ್ಟಿ ಅವರ ನಾಮಪತ್ರ ಸಲ್ಲಿಕೆ ವೇಳೆ ಕೆಲವರು ತಕರಾರು ಎತ್ತಿದ್ದಾರೆ. ಸರದಿಯಲ್ಲಿ ನಿಂತು ನಾಮಪತ್ರ ಸಲ್ಲಿಸಬೇಕು, ಮುಂದೆ ಬಂದವರಿಗೆ ಅವಕಾಶ ಮಾಡಿಕೊಡಬೇಡಿ ಎಂದು ಆಕ್ಷೇಪಣೆ ಮಾಡಿದರು.
ಇದರಿಂದ ಕೆಲಕಾಲ ಗೊಂದಲದ ವಾತಾವರಣ ಉಂಟಾಯಿತು. ಬಳಿಕ ಪತ್ರಕರ್ತರು, ಮದುವೆ ಮಂಟಪ ಬಿಟ್ಟು ನಾಮಪತ್ರ ಸಲ್ಲಿಸಲು ಬಂದಿದ್ದಾರೆ. ಕೊನೆ ಪಕ್ಷ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಲು ಅವಕಾಶ ಮಾಡಿ ಕೊಡಿ ಎಂದು ಹೇಳಿದಾಗ ಅವಕಾಶ ಮಾಡಿಕೊಟ್ಟರು.