ಮುದ್ದೇಬಿಹಾಳ : ಭಾನುವಾರದ ಲಾಕ್‌ಡೌನ್‌ಗೆ ಮತಕ್ಷೇತ್ರ ವ್ಯಾಪ್ತಿಯಲ್ಲಿ ಅವಳಿ ತಾಲೂಕಿನಲ್ಲಿ ಒಳ್ಳೆಯ ಸ್ಪಂದನೆ ಸಿಕ್ಕಿದೆ. ಅಗತ್ಯ ವಸ್ತುಗಳು ಹೊರತುಪಡಿಸಿ ಎಲ್ಲಾ ವ್ಯಾಪಾರ, ವಹಿವಾಟು ಸ್ಥಗಿತಗೊಳಿಸಲಾಗಿತ್ತು. ಕೊರೊನಾ ವಿರುದ್ಧದ ಹೋರಾಟಕ್ಕೆ ಸರ್ಕಾರದೊಂದಿಗೆ ನಾಗರಿಕರು ಕೈಜೋಡಿಸಿದರು.
ಮುದ್ದೇಬಿಹಾಳ ಮತಕ್ಷೇತ್ರ ವ್ಯಾಪ್ತಿ ಬರುವ ಮುದ್ದೇಬಿಹಾಳ ಹಾಗೂ ತಾಳಿಕೋಟೆ ಪಟ್ಟಣ ಒಳಗೊಂಡು ತಾಲೂಕಿನ ಎಲ್ಲಾ ಗ್ರಾಮೀಣ ಪ್ರದೇಶದಿಂದಲೂ ಲಾಕ್‌ಡೌನ್‌ಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಭಾನುವಾರ ನಸುಕಿನ ಜಾವ ಹಾಲು, ದಿನಪತ್ರಿಕೆ, ತರಕಾರಿ, ಮಾಂಸ ಇತರ ಸಾಮಗ್ರಿ ಖರೀದಿಗೆ ಆಗಮಿಸಿದ್ದ ನಾಗರಿಕರು 7 ಗಂಟೆಯ ಹೊತ್ತಿಗೆ ಎಲ್ಲರೂ ಮನೆ ಸೇರಿಕೊಂಡಿದ್ದರು.
ಪಟ್ಟಣದ ಬಸ್ ನಿಲ್ದಾಣ, ಪ್ರಮುಖ ವೃತ್ತಗಳಲ್ಲಿ ಜನರ ಓಡಾಟ ವಿರಳವಾಗಿತ್ತು. ಕೆಲಸವಿಲ್ಲದೇ ಅನಾವಶ್ಯಕ ಸುತ್ತಾಡುವವರಿಗೆ ಪೊಲೀಸ್ ಸಿಬ್ಬಂದಿ ಲಾಠಿ ರುಚಿ ತೋರಿಸಿ ಮನೆಗೆ ಕಳುಸಿದರು. ಮುದ್ದೇಬಿಹಾಳದಲ್ಲಿ ಸಿಪಿಐ ಆನಂದ ವಾಘಮೋಡೆ, ಪಿಎಸೈ ಮಲ್ಲಪ್ಪ ಮಡ್ಡಿ, ಕ್ರೈಂ ಎಸ್‌ಐಟಿಜೆ ನೆಲವಾಸಿ ನೇತೃತ್ವದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.
ತಾಳಿಕೋಟಿಯಲ್ಲಿ ಪೊಲೀಸ್‌ರಿಂದ ಬೈಕ್ ರ‍್ಯಾಲಿ : ಲಾಕ್‌ಡೌನ್ ಸಮಯದಲ್ಲಿ ಯಾರೂ ಮನೆಯಿಂದ ಆಚೆ ಬರದಂತೆ ತಾಳಿಕೋಟಿ ಪಿಎಸ್ಐ ಎಸ್ ಹೆಚ್ ಪವಾರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೈಕ್ ರ್ಯಾಲಿ ನಡೆಸುವ ಮೂಲಕ ಅನಾವಶ್ಯಕವಾಗಿ ಯಾರೂ ಹೊರಗಡೆ ತಿರುಗಾಡದಂತೆ ಎಚ್ಚರಿಕೆ ಸಂದೇಶ ರವಾನಿಸಿದರಲ್ಲದೇ ಪಿಎಸ್ಐ ಪವಾರ ಅಗತ್ಯ ವಸ್ತು ಮಾರಾಟ ನಿರತ ವ್ಯಾಪಾರಿಗಳಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚಿಸಿದರು.