ವಿಜಯಪುರ: ಜಿಲ್ಲೆಯ ಬಬಲೇಶ್ವರ ತಾಲೂಕಿನ ಉಪ್ಪಲದ್ದಿನಿ ಗ್ರಾಮದ ದೇವಸ್ಥಾನದ ಬಳಿಯ ಎರಡು ಹಳೆಯ ಸಮಾಧಿಗಳನ್ನು ಒಡೆದು ತೆರವುಗೊಳಿಸಿದ ವಿಷಯವಾಗಿ ಎರಡು ಕೋಮಿನ ನಡುವೆ ವಾಗ್ವಾದ ನಡೆದಿದೆ.
ಪರಿಸ್ಥಿತಿ ಹತೋಟಿ ತಪ್ಪುವ ಲಕ್ಷಣ ಕಾಣುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಎರಡು ಕೋಮಿನ ಜನರನ್ನು ಸಮಾಧಾನಪಡಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಉಪ್ಪಲದ್ದಿನಿ ಗ್ರಾಮದ ಸಂಗಮೇಶ್ವರ ದೇವಸ್ಥಾನದ ಮಹಾದ್ವಾರದ ಗೋಪುರದ ಪಕ್ಕದಲ್ಲಿಯೇ ಹಳೆಯ ಎರಡು ಸಮಾಧಿಗಳಿದ್ದು, ಅವುಗಳನ್ನು ಗ್ರಾಮಸ್ಥರು ಶುಕ್ರವಾರ ಬೆಳಗ್ಗೆ ತೆರವುಗೊಳಿಸಿದ್ದಾರೆ. ಈ ವಿಷಯವಾಗಿ ಒಂದು ಕೋಮಿನ ಜನರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪರಸ್ಪರ ವಾಗ್ವಾದ ನಡೆದಿದೆ. ಸಮಾಧಿಗಳನ್ನು ಒಡೆದು, ತೆರವುಗೊಳಿಸಿದ ಹಿನ್ನೆಲೆಯಲ್ಲಿ ಒಂದು ಕೋಮಿನ ಜನರು ಬಬಲೇಶ್ವರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸ್ಥಳಕ್ಕೆ ಡಿವೈಎಸ್ಪಿ, ಸಿಪಿಐ, ಪಿಎಸ್ಐ, ಹೆಚ್ಚುವರಿ ಎಸ್ಪಿ, ತಹಶೀಲ್ದಾರ್, ಗ್ರಾಮ ಲೆಕ್ಕಾಧಿಕಾರಿ ಭೇಟಿ ನೀಡಿ ಸ್ಥಳ ವಿವಾದವನ್ನು ಶಾಂತ ರೀತಿಯಲ್ಲಿ ಬಗೆಹರಿಸಿಕೊಳ್ಳುವಂತೆ ಎರಡು ಕೋಮಿನವರಿಗೆ ಸೂಚಿಸಿದರು. ಸದ್ಯ ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದಲ್ಲಿ ಭದ್ರತೆಗೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.