ವಿಜಯಪುರ: ಪ್ರವಾಹ ಪೀಡಿತ ಸಂತ್ರಸ್ತರ ಎಲ್ಲಾ ರೀತಿಯ ಸಾಲವನ್ನು ಮನ್ನಾ ಮಾಡಬೇಕು ಎಂದು ಕೂಡಲಸಂಗಮ ಪೀಠಾಧ್ಯಾಕ್ಷ ಬಸವಜಯ ಮೃತ್ಯುಂಜಯ ಶ್ರೀಗಳು ಒತ್ತಾಯಿಸಿದ್ದಾರೆ.
ಆಲಮಟ್ಟಿಯಲ್ಲಿ ಮಾತನಾಡಿದ ಅವರು, ಸಂತ್ರಸ್ತರಿಗೆ ಯುಕೆಪಿ ಮಾದರಿಯಲ್ಲಿ ಮನೆ ನಿರ್ಮಾಣ ಮಾಡಿಕೊಡಬೇಕು, ಪ್ರವಾಹದಿಂದ ಹಾನಿಯಾಗಿರುವ ಬೆಳೆಗೆ ಪ್ರತಿ ಎಕರೆಗೆ 50 ರಿಂದ 60 ಸಾವಿರ ಬೆಳೆ ಹಾನಿ ಪರಿಹಾರ ನೀಡಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಒತ್ತಾಯಿಸಿರುವುದಾಗಿ ತಿಳಿಸಿದರು.
ಪ್ರವಾಹದಿಂದ ಕೂಡಲಸಂಗಮ ಐಕ್ಯಮಂಟಪ ಹಾನಿಯಾಗಿದ್ದು, ಕಳೆದ 6 ತಿಂಗಳಿಂದ ಐಕ್ಯಮಂಟಪದ ದರ್ಶನ ಭಕ್ತರಿಗೆ ಸಿಕ್ಕಿಲ್ಲ. ಕೂಡಲ ಸಂಗಮ ಪ್ರಾಧಿಕಾರದ ಅಧ್ಯಕ್ಷರು ಮಾಡಿರುವ ಮನವಿಗೆ ಸಿಎಂ ತಕ್ಷಣ ಸ್ಪಂದಿಸಬೇಕು. ಹಾಗೂ ಪ್ರವಾಹ ಸಂತ್ರಸ್ತರ ಪರವಾಗಿ ಧ್ವನಿ ಎತ್ತಿರುವ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಪಕ್ಷ ನೀಡಿರುವ ನೋಟಿಸ್ ವಾಪಸ್ ಪಡೆಯಬೇಕು ಎಂದು ಇದೇ ವೇಳೆ ಒತ್ತಾಯಿಸಿದರು.
ಇನ್ನು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರವಾಹ ಸಂತ್ರಸ್ತರ ಪರವಾಗಿ ಮಾತನಾಡಿದ್ದಾರೆ. ಪಕ್ಷ ವಿರೋಧಿ ಹೇಳಿಕೆ ನೀಡಿಲ್ಲ, ಹೀಗಾಗಿ ಅವರಿಗೆ ನೀಡಿದ ನೋಟಿಸ್ ವಾಪಸ್ ಪಡೆದುಕೊಳ್ಳಬೇಕು ಎಂದು ಸಿಎಂ ಅವರಿಗೆ ಮನವಿ ಮಾಡುವುದಾಗಿದೆ ತಿಳಿಸಿದರು.