ಮುದ್ದೇಬಿಹಾಳ : ರಾಜ್ಯದಲ್ಲಿ ಲಾಕ್ಡೌನ್ ಘೋಷಣೆಯಾದ ನಂತರ ಕೂಲಿ ಕೆಲಸವನ್ನೇ ನಂಬಿ ಬದುಕು ನಡೆಸುತ್ತಿದ್ದ ವಿಶ್ವಕರ್ಮ ಸಮಾಜದ ವಿವಿಧ ಕುಲವೃತ್ತಿ ನಡೆಸುವವರಿಗೂ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಂತೆ ವಿಶ್ವಕರ್ಮ ಸಮಾಜದ ಮುಖಂಡ ಚಂದ್ರಶೇಖರ ಬಡಿಗೇರ ಆಗ್ರಹಿಸಿದ್ದಾರೆ.
ಈ ವೇಳೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಕೊರೊನಾ ಸಂದರ್ಭದಲ್ಲಿ ತೊಂದರೆಗೊಳಗಾದ ಕ್ಷೌರಿಕ, ಮಡಿವಾಳ, ನೇಕಾರ ಜನಾಂಗದವರಿಗೆ ವಿಶೇಷ ಪ್ಯಾಕೇಜ್ ನೀಡಿ ಅವರಿಗೆ ಆಸರೆಯಾಗುವ ಕೆಲಸವನ್ನು ಮಾಡಿದೆ. ಆದರೆ, ವಿಶ್ವಕರ್ಮ ಸಮಾಜದವರಿಗೆ ಯಾವುದೇ ಪ್ಯಾಕೇಜ್ ನೀಡಿಲ್ಲ. ಕೂಡಲೇ ತೊಂದರೆಯಲ್ಲಿರುವ ಕುಶಲಕರ್ಮಿಗಳ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಮುಖಂಡ ವಿಜಯಕುಮಾರ ಬಡಿಗೇರ ಮಾತನಾಡಿ, ಕಳೆದ ಎರಡು ತಿಂಗಳಿನಿಂದ ಕೋವಿಡ್-19 ಕೊರೊನಾ ವೈರಸ್‌ನಿಂದಾಗಿ ತೀವ್ರ ಸಂಕಷ್ಟಕ್ಕೀಡಾಗಿರುವ ಪಂಚಕಸುಬುಗಳಾದ ಚಿನ್ನ, ಬೆಳ್ಳಿ ಆಭರಣ ತಯಾರಕರು, ಬಡಿಗೆತನ ಶಿಲ್ಪಿಗಳು, ಕಂಚಿಗಾರಿಕೆ, ಕಬ್ಬಿಣ ಕೆಲಸ ಮಾಡುವ ವಿಶ್ವಕರ್ಮ ಸಮಾಜದ ಕಾರ್ಮಿಕರಿಗೆ ಯಾವುದೇ ಪರಿಹಾರ ಧನ ನೀಡದಿರುವುದು ನೋವಿನ ಸಂಗತಿಯಾಗಿದೆ.
ಕೂಡಲೇ ಸರ್ಕಾರ ವಿಶ್ವಕರ್ಮ ಸಮಾಜದ ಕಾರ್ಮಿಕರುಗಳಿಗೆ ವಿಶೇಷ ಅನುದಾನ ನೀಡಿ ಕೊರೊನಾ ಸಂಕಷ್ಟದಿಂದ ಸಂರಕ್ಷಿಸಬೇಕು ಎಂದು ಶಿರಸ್ತೇದಾರ ಎಸ್ ಎಸ್ ಸಜ್ಜನರಿಗೆ ಮನವಿ ಮಾಡಿದರು. ಈ ವೇಳೆ ಸಮಾಜದ ಅಧ್ಯಕ್ಷ ನಾರಾಯಣ ದೋಟಿಹಾಳ, ಮಲ್ಲಣ್ಣ ಪತ್ತಾರ, ಮಾನಪ್ಪ ಪತ್ತಾರ, ವಿರುಪಾಕ್ಷಿ ಪತ್ತಾರ, ಕಾಳಪ್ಪ ಬಡಿಗೇರ, ಮೌನೇಶ ಹಂದ್ರಾಳ, ಬ್ರಹ್ಮಾನಂದ ನಂದರಗಿ ಸೇರಿದಂತೆ ಹಲವರಿದ್ದರು.