ವಿಜಯಪುರ: ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯಲ್ಲಿ ಈ ಬಾರಿ ಸಾರ್ವಜನಿಕ ಗಣೇಶೋತ್ಸವವನ್ನು ರದ್ದುಪಡಿಸಲಾಗಿದೆ.
ಇದರ ಜೊತೆಗೆ ಜನರು ತಮ್ಮ ಮನೆಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಯ ಎತ್ತರವನ್ನೂ ಸಹ ಜಿಲ್ಲಾಡಳಿತ ನಿರ್ಧರಿಸಲಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ ತಿಳಿಸಿದ್ದಾರೆ.
ಗಣೇಶ ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಒಂದೆಡೆ ಸೇರುವ ಕಾರಣ ಸಾಮಾಜಿಕ ಅಂತರ ಕಾಪಾಡಲು ಆಗುವುದಿಲ್ಲ. ಇದರಿಂದಾಗಿ ಸೋಂಕು ಹೆಚ್ಚು ಪಸರಿಸುವ ಸಾಧ್ಯತೆ ಇದೆ. ಆದ್ದರಿಂದ ಜಿಲ್ಲಾಡಳಿತ ಈ ನಿರ್ಧಾರ ಕೈಗೊಂಡಿದೆ ಎಂದರು.
ಭಕ್ತರು ಜಿಲ್ಲಾಡಳಿತ ನಿರ್ಮಿಸಿದ ಹೊಂಡಗಳಲ್ಲಿಯೇ ಮೂರ್ತಿ ವಿಸರ್ಜನೆ ಮಾಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಸಾಂಕೇತಿಕವಾಗಿಯೂ ಉತ್ಸವ ಆಚರಿಸುವ ಹಾಗಿಲ್ಲ ಎಂದು ತಿಳಿಸಿದರು.
ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ಕುರಿತು ಸಭೆ ಮಾಡಿ, ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.