ವಿಜಯಪುರ : ನಗರದಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅವರ ನೇತೃತ್ವದ ಗಜಾನನ ಮಹಾಮಂಡಳಿ ವತಿಯಿಂದ ಪ್ರತಿನಿತ್ಯ ಕೋವಿಡ್ ಪೀಡಿತರ ಪರಿಚಾರಕರಿಗೆ ಆಹಾರದ ಪೊಟ್ಟಣಗಳನ್ನು ವಿತರಿಸಲಾಗುತ್ತಿದೆ.
ದಿನಕ್ಕೆ ಎರಡು ಬಾರಿ ವಿಜಯಪುರ ನಗರದ ವಿವಿಧ ಕೋವಿಡ್ ಆಸ್ಪತ್ರೆಗಳಿಗೆ ತೆರಳಿ ಗಜಾನನ ಮಹಾಮಂಡಳಿ ಸದಸ್ಯರು ಆಹಾರದ ಪ್ಯಾಕೇಟ್ಗಳನ್ನ ಕೊಡುತ್ತಿದ್ದಾರೆ.
ಲಾಕ್ಡೌನ್ ಹಿನ್ನೆಲೆ ಹೋಟೆಲ್ಗಳು ಬಂದ್ ಆಗಿರುವ ಹಿನ್ನೆಲೆ ಕೋವಿಡ್ ರೋಗಿಗಳ ಸಂಬಂಧಿಕರಿಗೆ ಗಜಾನನ ಮಹಾಮಂಡಳಿಯ 10 ಜನ ಸದಸ್ಯರು ಮಧ್ಯಾಹ್ನ ಹಾಗೂ ಸಂಜೆ ಎರಡು ಸಮಯ ಊಟ ನೀಡುತ್ತಿದ್ದಾರೆ.
ಒಂದು ದಿನ ಚಪಾತಿ- ಬದನೆಕಾಯಿ ಪಲ್ಯ ಕೊಟ್ಟರೆ ಮತ್ತೊಮ್ಮೆ ಮಸಾಲ ರೈಸ್, ಗೀ ರೈಸ್ ಅನ್ನು ಆಯಾ ಆಸ್ಪತ್ರೆಗಳ ಬಳಿ ತೆರಳಿ ಹಂಚುತ್ತಿದ್ದಾರೆ.
ಈ ಕುರಿತು ಮಾತನಾಡಿದ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಲಾಕ್ಡೌನ್ ಕಾರಣ ಎಲ್ಲಿಯೂ ಆಹಾರ ಸಿಗುತ್ತಿಲ್ಲ. ಹೀಗಾಗಿ, ರೋಗಿಗಳ ಸಂಬಂಧಿಕರಿಗೆ ಊಟ ಸಿಗುವುದು ಕಷ್ಟವಾಗುತ್ತಿದೆ. ಈ ಹಿನ್ನೆಲೆ ಗಜಾನನ ಮಹಾಮಂಡಳಿಯ ಸರ್ವ ಸದಸ್ಯರ ನಿರ್ಣಯದಂತೆ ಆಹಾರವನ್ನು ಆಯಾ ಆಸ್ಪತ್ರೆಗಳಿಗೆ ತೆರಳಿ ಕೊಡಲಾಗುತ್ತಿದೆ ಎಂದರು.
ಆಹಾರ ಪಡೆದ ರೋಗಿಯ ಸಂಬಂಧಿ ಪ್ರಕಾಶ ಬಿರಾದಾರ್ ಎಂಬುವರು ಮಾತನಾಡಿ, ಇಂದು ಹೊರಗಡೆ ಊಟ ಸಿಗುತ್ತಿಲ್ಲ. ಇಂಥ ಪರಿಸ್ಥಿತಿಯಲ್ಲಿ ಮಾಜಿ ಸಚಿವ ಪಟ್ಟಣಶೆಟ್ಟಿ ಗಜಾನನ ಮಹಾಮಂಡಳಿ ಮೂಲಕ ಊಟ ಕೊಡುತ್ತಿರುವುದು ತುಂಬಾ ಸಹಾಯಕಾರಿಯಾಗಿದೆ, ಅವರಿಗೆ ಧನ್ಯವಾದ ಎಂದ್ರು.