ವಿಜಯಪುರ: ಲಾಕ್ಡೌನ್ ಹಿನ್ನೆಲೆ ಕೂಲಿ, ಕಾರ್ಮಿಕರ ಬದುಕು ದುಸ್ಥರವಾಗಿದೆ. ಆದರೆ, ರಾಜ್ಯ ಸರ್ಕಾರ ನಡೆಸುತ್ತಿರುವ ಇಂದಿರಾ ಕ್ಯಾಂಟೀನ್ನಿಂದ ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿದ್ದಾರೆ.
ನಗರದಲ್ಲಿ ಇರುವ ನಾಲ್ಕು ಕ್ಯಾಂಟೀನ್‍ನಲ್ಲಿ ಉಚಿತ ತಿಂಡಿ, ಊಟ ನೀಡುತ್ತಿರುವ ಕಾರಣ ನಿತ್ಯ 500ಕ್ಕೂ ಹೆಚ್ಚು ಬಡವರು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಆದರೆ, ಇಂದಿರಾ ಕ್ಯಾಂಟೀನ್ ಗುತ್ತಿಗೆ ಪಡೆದವರಿಗೆ ಕಳೆದ 7 ತಿಂಗಳಿಂದ ಬಾಕಿ ಹಣ ಬರದಿದ್ದರೂ ಮಾನವೀಯತೆ ದೃಷ್ಟಿಯಿಂದ ಊಟ ನೀಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ.
ಸರ್ಕಾರ ಬಡವರಿಗಾಗಿ ಕೇವಲ ಪ್ಯಾಕೇಜ್ ಘೋಷಿಸಿದರೆ ಸಾಲದು ಎಂದು ಇಂದಿರಾ ಕ್ಯಾಂಟಿನ್ ಬಳಸಿಕೊಂಡು ಬಡವರಿಗೆ ಊಟದ ವ್ಯವಸ್ಥೆ ಮಾಡಿದೆ. ನಗರದ ನಾಲ್ಕು ಕೇಂದ್ರದಲ್ಲಿ ಬೆಳಗ್ಗೆ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಊಟದ ವ್ಯವಸ್ಥೆ ಮಾಡಿದೆ. ಈ ಹಿಂದೆ ಕ್ಯಾಂಟಿನ್‍ಗೆ 250-300 ಜನ ಬರುತ್ತಿದ್ದರು. ಈಗ 500ಕ್ಕಿಂತ ಹೆಚ್ಚು ಜನ ಊಟಕ್ಕೆ ಬರುತ್ತಿದ್ದಾರೆ. ಎಷ್ಟೇ ಜನ ಬರಲಿ ಅವರಿಗೆ ಉಚಿತ ಊಟದ ವ್ಯವಸ್ಥೆ ಮಾಡುವುದಾಗಿ ಕ್ಯಾಂಟೀನ್ ವ್ಯವಸ್ಥಾಪಕ ಕೃಷ್ಣ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.
ಓದಿ:ಮೇಕೆದಾಟು ಯೋಜನೆ ವಿವಾದ: ಕಾನೂನು ಹೋರಾಟಕ್ಕೆ ಮುಂದಾದ ರಾಜ್ಯ ಸರ್ಕಾರ