ವಿಜಯಪುರ: ಇಂದು ಅದೆಷ್ಟೋ ಮಕ್ಕಳು ತಮ್ಮನ್ನು ಹೆತ್ತು ಹೊತ್ತು ಬೆಳೆಸಿದ ತಂದೆ ತಾಯಿಗಳನ್ನೇ ಮನೆಯಿಂದ ಹೊರ ಹಾಕುವ ಉದಾಹರಣೆಗಳು ನಮ್ಮ ಕಣ್ಣು ಮುಂದೆ ಇವೆ. ಆದರೆ, ಇಲ್ಲೊಂದು ಸಂಬಂಧಿಯೊಬ್ಬರು ರಸ್ತೆಯಲ್ಲಿ ಬಿಟ್ಟು ಹೋಗಿದ್ದ ಅಂಧ ವೃದ್ಧೆಗೆ ವೈದ್ಯರೊಬ್ಬರು ಚಿಕಿತ್ಸೆ ಕೊಡಿಸಿ ಕಣ್ಣು ಕಾಣುವಂತೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ವೈದ್ಯರ ಈ ಕಾರ್ಯಕ್ಕೆ ಇದೀಗ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಅಂಧ ವೃದ್ಧೆಯೊಬ್ಬರನ್ನು ಕಣ್ಣಿನ ಚಿಕಿತ್ಸೆ ಕೊಡಿಸುತ್ತೇನೆ ಎಂದು ನಂಬಿಸಿ ಕರೆದುಕೊಂಡು ಬಂದು ಸಂಬಂಧಿಯೊಬ್ಬರು ರಸ್ತೆಯಲ್ಲಿ ಬಿಟ್ಟು ಹೋಗಿದ್ದರು. ವೃದ್ಧೆ ಬಗ್ಗೆ ಮಾಹಿತಿ ಪಡೆದ ವೈದ್ಯರು ಆಕೆಯನ್ನು ತಮ್ಮ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಕೊಡಿಸಿ ಕಣ್ಣು ಕಾಣುವಂತೆ ಮಾಡಿದ್ದಾರೆ. ವಿಜಯಪುರ ನಗರದ ಖ್ಯಾತ ನೇತ್ರ ತಜ್ಞ ಡಾ ಪ್ರಭುಗೌಡ ಲಿಂಗದಳ್ಳಿ ಅವರು ಚಿಕಿತ್ಸೆ ನೀಡಿದ ವೈದ್ಯರು.
ಹೌದು, ಮೂಲತಃ ಕೊಪ್ಪಳ ಜಿಲ್ಲೆಯ ಕುಷ್ಟಗಿ ಮೂಲದ 70 ವರ್ಷದ ವೃದ್ಧೆ ಗೌರಮ್ಮ ಕುಂಬಾರ. ಇವರ ಸಂಬಂಧಿಯೊಬ್ಬರು ಕುಷ್ಟಗಿಯಿಂದ ವಿಜಯಪುರಕ್ಕೆ ಕಣ್ಣಿನ ಚಿಕಿತ್ಸೆ ಕೊಡಿಸುವುದಾಗಿ ಹೇಳಿ ಕರೆದುಕೊಂಡು ಬಂದು ವಿಜಯಪುರ ನಗರದ ಇಬ್ರಾಹಿಂಪುರ ರೈಲ್ವೇ ಬ್ರಿಡ್ಜ್ ಬಳಿ ಬಿಟ್ಟು ಹೋಗಿದ್ದರು. ಅಲ್ಲೇ ಇದ್ದ ಟ್ಯಾಕ್ಸಿ ಚಾಲಕ ರಮೇಶ ರತ್ನಾಕರ ಎಂಬಾತ ಅಜ್ಜಿಯನ್ನು ಗಮನಿಸಿ ವಿಚಾರಿಸಿದಾಗ ನಡೆದಿದ್ದನ್ನು ತಿಳಿಸಿದ್ದಾಳೆ. ಇದೇ ವೇಳೆ ಅಜ್ಜಿಗೆ ಕಣ್ಣು ಕಾಣದೇ ಇರುವುದನ್ನು ಗಮನಿಸಿ, ಆಕೆಗೆ ಊಟ ಮಾಡಿಸಿ ಊರಿನ ಬಸ್ ಹತ್ತಿಸಬೇಕು ಎಂದು ಹೋಟೆಲ್ಗೆ ಕರೆದುಕೊಂಡು ಹೋಗಿದ್ದಾರೆ.
ಆದರೆ, ಅದೇ ಹೊಟೇಲ್ಗೆ ಆಗಮಿಸಿದ್ದ ನೇತ್ರ ತಜ್ಞ ಡಾ. ಪ್ರಭುಗೌಡ ಲಿಂಗದಳ್ಳಿ ಅವರು ಇದನ್ನು ಗಮನಿಸಿದ್ದಾರೆ. ಅಜ್ಜಿಯ ಹಿನ್ನೆಲೆ ವಿಚಾರಿಸಿ, ಅಲ್ಲೇ ಕಣ್ಣನ್ನು ಪರಿಕ್ಷೆ ಮಾಡಿ ಆಪರೇಷನ್ ಮಾಡಿದರೆ ಗುಣಪಡಿಸಬಹುದು ಎಂದು ತಮ್ಮ ಕಾರಿನಲ್ಲೇ ಅವರ ಆಸ್ಪತ್ರೆಗೆ ಅಜ್ಜಿಯನ್ನು ಕಳುಹಿಸಿದ್ದಾರೆ. ಬಳಿಕ ಅಜ್ಜಿಗೆ ಉಚಿತವಾಗಿ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಅಜ್ಜಿಯ ಪಾಲಿಗೆ ಕತ್ತಲಾಗಿದ್ದ ಜಗತ್ತು, ಈಗ ಬೆಳಕಾಗಿದೆ. ಡಾ.ಫ್ರಭುಗೌಡ ಲಿಂಗದಳ್ಳಿ ಅವರು ಎರಡು ದಿನಗಳ ಕಾಲ ಅಜ್ಜಿಯನ್ನು ತಮ್ಮ ಆಸ್ಪತ್ರೆಯಲ್ಲಿಯೇ ಉಳಿಸಿಕೊಂಡು ಸಂಪೂರ್ಣ ಉಚಿತವಾಗಿ ಅಜ್ಜಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಅಜ್ಜಿ ಕೂಡ ಖುಷಿಯಾಗಿದ್ದಾಳೆ.
ಸಾಮಾಜಿಕ ಕಳಕಳಿಯುಳ್ಳ ವೈದ್ಯ: ಡಾ.ಫ್ರಭುಗೌಡ ಲಿಂಗದಳ್ಳಿ ಕಳೆದ 20 ವರ್ಷಗಳಲ್ಲಿ ಬರೋಬ್ಬರಿ 35 ರಿಂದ 40 ಸಾವಿರ ಜನರಿಗೆ ಉಚಿತ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ತಮ್ಮ 'ಅನುಗ್ರಹ' ಆಸ್ಪತ್ರೆ ಮೂಲಕ ಹಳ್ಳಿ ಹಳ್ಳಿಗಳಲ್ಲಿ ಫ್ರೀ ಹೆಲ್ತ್ ಕ್ಯಾಂಪ್ ಕೂಡಾ ಮಾಡುತ್ತಾರೆ. ಇನ್ನೂ ಇವರ ಸಾಮಾಜಿಕ ಸೇವೆ ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿ, ಗೌರವಿಸಿವೆ. ಪ್ರಮುಖವಾಗಿ ರಾಜ್ಯ ಸರ್ಕಾರ ಇವರಿಗೆ 2021ರಲ್ಲಿಯೇ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.
ಅಜ್ಜಿಗೆ ಉಚಿತ ಚಿಕಿತ್ಸೆ ನೀಡಿ, ಅವಳನ್ನು ಮರಳಿ ಊರಿಗೆ ತಲುಪಿಸುವ ಎಲ್ಲ ವ್ಯವಸ್ಥೆಯನ್ನು ಡಾ.ಪ್ರಭುಗೌಡ ಲಿಂಗದಳ್ಳಿ ಅವರು ಮಾಡಿದ್ದಾರೆ. ತಮ್ಮ ಮಕ್ಕಳಿಗಾಗಿ ತಮ್ಮ ಇಡೀ ಜೀವನ ಸವೆಸುವ ತಂದೆ ತಾಯಿಗೆ ವೃದ್ಧಾಪ್ಯದಲ್ಲಿ ಮಕ್ಕಳು, ಸಂಬಂಧಿಕರು ಈ ರೀತಿ ಮಾಡಬಾರದು ಎಂದು ಡಾ.ಪ್ರಭುಗೌಡ ಲಿಂಗದಳ್ಳಿ ಮನವಿ ಮಾಡಿದ್ದಾರೆ. ಇನ್ನು ಅಜ್ಜಿ ಗೌರಮ್ಮ ಕೂಡ ಡಾ.ಪ್ರಭುಗೌಡ ಅವರಿಗೆ ಧನ್ಯವಾದ ಅರ್ಪಿಸಿ, ಜಗತ್ತು ನೋಡುವಂತೆ ಮಾಡಿದ ನಿಮಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದ್ದಾಳೆ.
ಇದನ್ನೂ ಓದಿ: ಶಿವಮೊಗ್ಗ: ದಾರಿತಪ್ಪಿ ಎರಡು ರಾತ್ರಿ, ಹಗಲು ಕಾಡಿನಲ್ಲಿ ವಾಸ: ಸುರಕ್ಷಿತವಾಗಿ ಮನೆ ಸೇರಿದ 85 ವರ್ಷದ ವೃದ್ಧೆ