ವಿಜಯಪುರ: ದುಬೈನಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ವಿಜಯಪುರದ ಮುಕ್ತಂ ಮುಜಾವರ್ ಅನ್ನೋ ಏಜೆಂಟ್ ಇಬ್ಬರನ್ನು ವಂಚಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಇಬ್ಬರು ವ್ಯಕ್ತಿಗಳು ಏಜೆಂಟರನ್ನು ನಂಬಿ ದುಬೈನಲ್ಲಿ ಪರದಾಡಿದ್ದಲ್ಲದೇ, ತಮ್ಮ ಹಣವನ್ನೂ ಸಹ ಕಳೆದುಕೊಂಡಿದ್ದಾರೆ. ವಿಜಯಪುರ ನಿವಾಸಿಗಳಾದ ರಮೇಶ ರಾಠೋಡ, ಸಾಗರ ರಾಠೋಡ ಎಂಬುವವರು ಮೋಸ ಹೋಗಿದ್ದಾರೆ.
ಏಜೆಂಟ್ ಇವರಿಗೆ ದುಬೈನಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಒಂದೂವರೆ ಲಕ್ಷ ರೂ. ಪಡೆದು ಟೂರಿಸ್ಟ್ ಪಾಸ್ಪೋರ್ಟ್ ಮಾಡಿಸಿಕೊಟ್ಟಿದ್ದಾನೆ. ಅಲ್ಲದೇ ನಕಲಿ ಕಂಪನಿಯ ಪೇಪರ್ ತೋರಿಸಿ ನಿಮಗೆ ಆಸ್ಪತ್ರೆಯಲ್ಲಿ ಕೆಲಸ ಸಿಗಲಿದೆ ಎಂದಿದ್ದಾನೆ. ಈತನ ಮಾತು ನಂಬಿದ ರಮೇಶ ಹಾಗೂ ಸಾಗರ ಮಾರ್ಚ್ 9ರಂದು ದುಬೈನ ಶಾರ್ಜಾಗೆ ತೆರಳಿದ್ದರು. ವಿಜಯಪುರದ ಇಬ್ಬರು ಸೇರಿದಂತೆ ಮುಂಬೈನಿಂದ ಒಟ್ಟು 20ಜನರು ದುಬೈಗೆ ಪ್ರಯಾಣ ಬೆಳೆಸಿದ್ದಾರೆ. ಆದರೆ ದುಬೈಗೆ ತೆರಳಿದಾಗ ಏಜೆಂಟ್ನ ಅಸಲಿಯತ್ತು ಗೊತ್ತಾಗಿದೆ.
ನಿಮ್ಮದು ಟೂರಿಸ್ಟ್ ಪಾಸ್ಪೋರ್ಟ್ ಇದೆ. ನಿಮಗೆ ಇಲ್ಲಿ ಕೆಲಸ ಇಲ್ಲ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದಾಗ ಮೋಸ ಹೋಗಿರುವ ಬಗ್ಗೆ ಈ ಇಬ್ಬರು ಯುವಕರಿಗೆ ತಿಳಿದಿದೆ. ಅಧಿಕಾರಿಗಳ ಮಾತನ್ನು ಕೇಳಿ ಮರಳಿ ಏಜೆಂಟ್ ಮುಕ್ತಂ ಮುಜಾವರ್ಗೆ ಅಲ್ಲಿಂದಲೇ ಕರೆ ಮಾಡಿದ್ದಾರೆ. ಆದರೆ ಅಂದಿನಿಂದಲೂ ಏಜೆಂಟ್ ಇವರ ಸಂಪರ್ಕಕ್ಕೆ ಸಿಕ್ಕಿಲ್ಲ. ಬಳಿಕ 15 ದಿನ ಕಾದರೂ ಯಾವುದೇ ಪ್ರಯೋಜನವಾಗದ ಕಾರಣ ಮರಳಿ ಭಾರತಕ್ಕೆ ಬಂದಿದ್ದಾರೆ. ಸದ್ಯ ಹಣ ಪಡೆದು ಮೋಸ ಮಾಡಿದ ಏಜೆಂಟ್ ಮುಕ್ತಂ ಮುಜಾವರ್ಗಾಗಿ ಹುಡುಕಾಟ ನಡೆಸುತ್ತಿದ್ದು, ನಮಗಾದ ಪರಿಸ್ಥಿತಿ ಯಾರಿಗೂ ಬರದಿರಲಿ ಎನ್ನುತ್ತಿದ್ದಾರೆ ರಮೇಶ ಹಾಗೂ ಸಾಗರ ರಾಠೋಡ.
ಇದನ್ನೂ ಓದಿ: ದುರಸ್ತಿ ಕಾರ್ಯ: ಸಿಲಿಕಾನ್ ಸಿಟಿಯ ಹಲವೆಡೆ ಮೂರು ದಿನ ಪವರ್ ಕಟ್!