ವಿಜಯಪುರ: ಸಿಎಂ ಯಡಿಯೂರಪ್ಪನವರಿಗೆ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ರಾಜ್ಯಕ್ಕೆ ಬರಬೇಕಿದ್ದ 35,000 ಕೋಟಿ ಕಡಿತಗೊಳಿಸಿದೆ. ಯಡಿಯೂರಪ್ಪನವರ ಮೇಲೆ ಸಿಟ್ಟಿದ್ದರೆ ಕರ್ನಾಟಕದ ಮೇಲೆ ಯಾಕೆ ಮುಯ್ಯಿ ತೀರಿಸಿಕೊಳ್ಳಬೇಕು. ಯಡಿಯೂರಪ್ಪ ಲಿಂಗಾಯಿತರಾಗಿ ಹುಟ್ಟಿದ್ದೇ ತಪ್ಪಾದಂತಾಗಿದೆ. ಕೇಂದ್ರ ಸರ್ಕಾರ ಯಡಿಯೂರಪ್ಪ ಅವರಿಗೆ ಮದುವೆ ಮಾಡಿ ಪ್ರಸ್ಥಕ್ಕೆ ಬಿಡುತ್ತಿಲ್ಲ ಎಂದು ಮಾಜಿ ಕೇಂದ್ರ ಸಚಿವ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.
ವಿಜಯಪುರ ಜಿಲ್ಲೆಯ ನಿಡಗುಂದಿ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ಕೇಂದ್ರ ಸರ್ಕಾರ ಸರಿಯಾಗಿ ಅನುದಾನ ನೀಡುತ್ತಿಲ್ಲ. ದೆಹಲಿ ಮಾದರಿಯಲ್ಲಿ ರಾಜ್ಯದ ಜನತೆ ತೀರ್ಪು ನೀಡಬೇಕಾಗಿದೆ ಎಂದು ಕರೆ ನೀಡಿದ್ದಾರೆ.
ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಲು ಸಿದ್ಧವಿರುವುದಾಗಿ ನೀಡಿದ ಹೇಳಿಕೆ ಕುರಿತು ಪ್ರತಿಕ್ರಿಯಿಸಿ ಬಸ್ ಸ್ಟ್ಯಾಂಡ್ನಲ್ಲಿ ಮದುವೆಯಾದಂತೆ ಇವರು ಬಿಜೆಪಿ ಸೇರಿದ್ಧಾರೆ. ಬೇರೆ ಬಸ್ ಬಂದ ತತ್ಕ್ಷಣ ಹತ್ತಿ ಹೋಗುತ್ತಾರೆ ಎಂದು ಕಿಚಾಯಿಸಿದ್ಧಾರೆ. ಹಾಗೆ ಬಿಜೆಪಿಯ ಶಾಸಕರು ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಇದು ಒಂದು ವಾರದಲ್ಲಿ ಸ್ಪಷ್ಟವಾಗಲಿದೆ ಎಂದು ಶಾಕಿಂಗ್ ಸುದ್ದಿ ನೀಡಿದ್ಧಾರೆ.