ವಿಜಯಪುರ: ಪಿಎಸ್ಐ ನೇಮಕಾತಿಯಲ್ಲಿ ನಡೆದಿರುವ ಅಕ್ರಮದಲ್ಲಿ ಯಾರು ಅಪರಾಧಿಗಳು, ಎಷ್ಟು ಅಕ್ರಮ ನಡೆದಿದೆ ಎಂಬುದು ಬಹಿರಂಗಗೊಳ್ಳಬೇಕು ಎಂದು ಮಾಜಿ ಸ್ಪೀಕರ್ ರಮೇಶ ಕುಮಾರ್ ಒತ್ತಾಯಿಸಿದರು. ವಿಜಯಪುರಕ್ಕೆ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಈ ಕುರಿತು ಹೆಚ್ಚಿನ ತನಿಖೆಯಾಗಬೇಕು. ಆರೋಗ್ಯಕರ ಸಮಾಜ ಕಟ್ಟೋಕೆ ಇಂಥ ಘಟನೆಗಳು ನಡೆಯಬಾರದು. ನಾಗರಿಕ ಸಮಾಜಕ್ಕೆ ಇದು ಅಪಮಾನ ಎಂದರು.
ಇದೊಂದೇ ಅಲ್ಲ, ಇಂತಹ ಯಾವುದೇ ಘಟನೆಗಳು ಒಪ್ಪುವಂಥದ್ದಲ್ಲ. ಕಾನೂನು ಗೌರವಿಸದವರಿಗೆ ಶಿಕ್ಷೆಯಾಗಬೇಕು. ಆಗಲೇ ಇದೊಂದು ದೇಶ ಆಗುವುದು. ದೇಶ ಮುನ್ನಡೆಯಲು ಸಂವಿಧಾನ ಮಾಡಿಕೊಂಡಿದ್ದೇವೆ. ಆ ಸಂವಿಧಾನದ ಬಗ್ಗೆ ಗೌರವ ಇಲ್ಲದವರಿಗೆ ಶಿಕ್ಷೆಯಾಗಬೇಕು ಎಂದು ಹೇಳಿದರು.
ದಲಿತ ಸಿಎಂ ವಿಚಾರ: ರಾಜ್ಯದಲ್ಲಿ ದಲಿತ ಸಿಎಂ ಆಗಬೇಕು. ಅದು ಯಾವುದೇ ಪಕ್ಷದಿಂದಾದರೂ ಆಗಲಿ ಎಂಬ ಸಂಸದ ರಮೇಶ ಜಿಗಜಿಣಗಿ ಹೇಳಿಕೆ ವಿಚಾರವಾಗಿ ಮಾತನಾಡಿ, ಯಾವ ಪಕ್ಷ ಗೆಲ್ಲುತ್ತದೆ, ಆ ಪಕ್ಷದ ಮುಖಂಡ ಸಿಎಂ ಆಗಲಿ. ಅದು ದಲಿತ ಸಿಎಂ ಆಗಬೇಕಾದರೆ ಗೆದ್ದ ಪಕ್ಷದ ನಾಯಕರು ತೀರ್ಮಾನ ಮಾಡುತ್ತಾರೆ. ನಮ್ಮದು ಯಾವುದೇ ವಿರೋಧವಿಲ್ಲ ಎಂದು ರಮೇಶಕುಮಾರ್ ಹೇಳಿದರು.
ಇದನ್ನೂ ಓದಿ: ಸಂಪುಟ ವಿಸ್ತರಣೆ ಬಗ್ಗೆ ಇನ್ನೂ ಚರ್ಚೆ ಆಗಿಲ್ಲ, ನಾಳೆ ದೆಹಲಿಗೆ ತೆರಳುವೆ: ಸಿಎಂ