ಮುದ್ದೇಬಿಹಾಳ: ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ವಿದ್ಯಾರ್ಥಿಗಳಿಗೆ ಮಾಸ್ಕ್, ಸ್ಯಾನಿಟೈಸರ್ ಅನ್ನು ಸರ್ಕಾರವೇ ಕೊಡುತ್ತದೆ ಎಂದು ನೀಡಿದ್ದರು. ಸ್ಥಳೀಯ ಶಾಸಕರು ಅಗ್ಗದ ಮಾಸ್ಕ್ ಹಾಗೂ ಸ್ಯಾನಿಟೈಸರ್ ಕೊಟ್ಟು ರಾಜಕಾರಣ ಮಾಡುತ್ತಿದ್ದಾರೆ. ಇಲ್ಲಿನ ಬಿಇಒ ಒಂದು ಪಕ್ಷದ ಏಜೆಂಟರಾ? ಎಂದು ಮಾಜಿ ಶಾಸಕ ಸಿ.ಎಸ್.ನಾಡಗೌಡ (ಅಪ್ಪಾಜಿ) ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿ ಹಾಗೂ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸಣ್ಣ ಮಕ್ಕಳನ್ನು, ವಿದ್ಯಾರ್ಥಿಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದೀರಾ? ಎಂದು ಪ್ರಶ್ನಿಸಿದರು.
ಸುರೇಶ್ ಕುಮಾರ್ ಅವರನ್ನು ಭೇಟಿಯಾಗಿ ಈ ಕುರಿತು ಕ್ರಮಕ್ಕೆ ಒತ್ತಾಯಿಸುತ್ತೇನೆ. ಪ್ರಚಾರಕ್ಕೋಸ್ಕರ ಶಿಕ್ಷಣ ಇಲಾಖೆಯನ್ನು ಬಳಸಿಕೊಳ್ಳುತ್ತಿರುವುದು ದುರ್ದೈವ. ಅಧಿಕಾರಿಗಳು ತಾಲೂಕಿನಲ್ಲಿ ಏಜೆಂಟರಿಗಿಂತಲೂ ಹೆಚ್ಚಾಗಿ ವರ್ತಿಸುತ್ತಿರುವುದು ನಾಚಿಗೇಡಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ಸೇನೆಯ ಗೌಪ್ಯತೆ ಉಲ್ಲಂಘನೆ: ಚೀನಾ ದೇಶದ ವಿರುದ್ಧ ಸೈನ್ಯದ ಕಾರ್ಯಾಚರಣೆಯ ಕುರಿತು ಮಾಧ್ಯಮಗಳಲ್ಲಿ ಬಹಿರಂಗ ಚರ್ಚೆಗಳಿಗೆ ಆಸ್ಪದ ಕೊಟ್ಟು ಸೇನೆಯ ಗೌಪ್ಯತೆಯನ್ನು ಕೇಂದ್ರ ಸರ್ಕಾರದ ಉಲ್ಲಂಘಿಸುತ್ತಿದೆ ಎಂದು ನಾಡಗೌಡ ಹರಿಹಾಯ್ದರು.
ಚೀನಾದಿಂದ ಶೇ.70-80ರಷ್ಟು ವಸ್ತುಗಳು ಆಮದಾಗುತ್ತದೆ. ಭಾರತದಿಂದ ಶೇ.10-20ರಷ್ಟು ವಸ್ತುಗಳು ಮಾತ್ರ ರಫ್ತಾಗುತ್ತಿವೆ. ಹಳ್ಳ ಹಿಡಿದಿರುವ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕಿದ್ದು, ಚೀನಾ ವಸ್ತುಗಳನ್ನು ಬಹಿಷ್ಕರಿಸಿ ಎಂದು ಒತ್ತಾಯಿಸಿದರು.