ಮುದ್ದೇಬಿಹಾಳ: ಕೊರೊನಾ ವೈರಸ್ ಹಾವಳಿಯಿಂದಾಗಿ ಎಲ್ಲೆಡೆ ಕಾರ್ಮಿಕರು ಸಂಕಷ್ಟಕ್ಕೀಡಾಗಿದ್ದು, ಕ್ವಾರಂಟೈನ್‌ಲ್ಲಿರುವ ವಲಸೆ ಕಾರ್ಮಿಕರಿಗೆ ಪೌಷ್ಟಿಕಾಂಶವುಳ್ಳ ಆಹಾರವನ್ನು ಮಾಜಿ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ವಿತರಣೆ ಮಾಡಿದರು.
ಪಟ್ಟಣದ ತಂಗಡಗಿ ರಸ್ತೆಯಲ್ಲಿನ ಎಸ್.ಎಸ್.ಶಿವಾಚಾರ್ಯ ಕಾಲೇಜಿನಲ್ಲಿ ಮಂಗಳವಾರ ಕ್ವಾರಂಟೈನ್‌ಲ್ಲಿರುವ ವಲಸೆ ಕಾರ್ಮಿಕರಿಗೆ ಪೌಷ್ಟಿಕಾಂಶವುಳ್ಳ ಆಹಾರ ವಿತರಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ವೈರಸ್ ಹಾವಳಿಯಿಂದಾಗಿ ಎಲ್ಲೆಡೆ ಕಾರ್ಮಿಕರು ಸಂಕಷ್ಟಕ್ಕೀಡಾಗಿದ್ದಾರೆ. ಅವರ ನೆರವಿಗೆ ಸಂಘ ಸಂಸ್ಥೆಗಳು, ಸಮಾಜದಲ್ಲಿರುವ ಸ್ಥಿತಿವಂತರು ನೆರವಿಗೆ ನಿಲ್ಲಬೇಕು ಎಂದರು.
ಸದ್ಯಕ್ಕೆ ಸರ್ಕಾರ ಕೊಡುತ್ತಿರುವ ಊಟದ ಜೊತೆಗೆ ಕ್ವಾರಂಟೈನ್ ಕೇಂದ್ರದಲ್ಲಿರುವ ಕಾರ್ಮಿಕರ ಮಕ್ಕಳಿಗೆ, ಮಹಿಳೆಯರಿಗೆ ಪೌಷ್ಟಿಕಾಂಶವುಳ್ಳ ಆಹಾರದ ಅಗತ್ಯತೆಯನ್ನು ಮನಗಂಡು ಮೊಟ್ಟೆ, ಹಾಲು, ಬ್ರೆಡ್, ಬಾಳೆಹಣ್ಣು ವಿತರಣೆ ಮಾಡುತ್ತಿದ್ದೇವೆ. ತಾಲೂಕಿನ ಎಲ್ಲಾ ಕ್ವಾರಂಟೈನ್ ಕೇಂದ್ರದಲ್ಲಿರುವ ಕಾರ್ಮಿಕರಿಗೆ ಪೌಷ್ಟಿಕಾಂಶ ಆಹಾರ ನೀಡಲಾಗುತ್ತದೆ ಎಂದು ಹೇಳಿದರು.

ಎಲ್ಲವನ್ನೂ ಸರ್ಕಾರವೇ ಮಾಡಲಿ ಎಂದು ಕೂರುವ ಬದಲು ಈಗಿನ ಸಂದಿಗ್ಧ ಪರಿಸ್ಥಿತಿಯನ್ನು ಒಗ್ಗೂಡಿ ಎದುರಿಸಬೇಕಾಗಿದೆ. ಇದರಲ್ಲಿ ಬೇರೆ ಯಾವ ಉದ್ದೇಶವೂ ಇಲ್ಲ ಎಂದು ಹೇಳಿದರು.