ವಿಜಯಪುರ: ಜಿಲ್ಲೆಯಿಂದ ಸಾಕಷ್ಟು ಜನ ಗೋವಾ ರಾಜ್ಯಕ್ಕೆ ಗುಳೆ ಹೋಗಿದ್ದು, ಲಾಕ್‍ಡೌನ್ ನಿಮಿತ್ತ ಕನ್ನಡಿಗರಿಗೆ ಬಹಳಷ್ಟು ಕಷ್ಟ ಆಗಿದೆ ಎಂಬ ಕೂಗಿನ ಹಿನ್ನೆಲೆ ಮಾಜಿ ಸಚಿವ ಎಂ.ಬಿ.ಪಾಟೀಲ್ ಗೋವಾದ ವಿಜ್ಞಾನ ತಂತ್ರಜ್ಞಾನ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಮೈಕಲ್ ಲೋಬೊ ಅವರ ಜೊತೆ ಮಾತುಕತೆ ನಡೆಸಿದ್ದಾರೆ.
ದೂರವಾಣಿ ಮೂಲಕ ಅವರ ಜೊತೆ ಮಾತನಾಡಿದ್ದಾರೆ. “ಕನ್ನಡಿಗರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ನಾನು ಖುದ್ದಾಗಿ ಈ ಕುರಿತು ಮುತುವರ್ಜಿ ವಹಿಸುತ್ತೇನೆ. ಕರ್ನಾಟಕದ ಯಾರೂ ಕೂಡ ಈ ಕುರಿತು ಗಾಬರಿಯಾಗಬಾರದು” ಎಂದು ಮೈಕಲ್ ಲೋಬೊ ಅಭಯ ನೀಡಿದ್ದಾರೆ.
![ಗೋವಾ ಸಚಿವರ ಜತೆ ಮಾತುಕತೆ](https://etvbharatimages.akamaized.net/etvbharat/prod-images/kn-vjp-04-patil-goa-av-7202140_02042020170528_0204f_1585827328_146.jpg)
“ಗೋವಾದಲ್ಲಿ ಕನ್ನಡಿಗರ ಸ್ಥಿತಿ ಅತಂತ್ರವಾಗಿದೆ. ಅವರ ನೆರವಿಗೆ ಯಾರೂ ಬರುತ್ತಿಲ್ಲ. ಅಲ್ಲಿನ ನಮ್ಮ ಜನರಲ್ಲಿ ಆತಂಕ ನಿರ್ಮಾಣವಾಗಿದೆ. ಮಾಧ್ಯಮಗಳಲ್ಲಿಯೂ ಈ ಕುರಿತು ವರದಿಯಾಗಿದೆ. ಕಾರಣ ನೀವು ದಯವಿಟ್ಟು ಅಲ್ಲಿನ ಕನ್ನಡಿಗರ ರಕ್ಷಣೆ ಮಾಡಿ. ಇದು ಕರ್ನಾಟಕದ ಪರವಾಗಿ ಕಳಕಳಿಯ ವಿನಂತಿ ಎಂದು ಎಂ.ಬಿ.ಪಾಟೀಲ್ ಗೋವಾ ಸರ್ಕಾರದ ಪ್ರಭಾವಿ ಸಚಿವ ಮೈಕಲ್ ಲೋಬೊ ಅವರಲ್ಲಿ ವಿನಂತಿಸಿಕೊಂಡಿದ್ದಾರೆ.
ಗೋವಾದಲ್ಲಿರುವ ಕನ್ನಡಿಗರ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದ್ದು, ಎರಡು ಸ್ಥಳಗಳಲ್ಲಿ ಉಚಿತ ಭೋಜನಾಲಯಗಳನ್ನು ಆರಂಭಿಸಲಾಗಿದೆ. ಅಲ್ಲದೇ ದಿನನಿತ್ಯದ ರೇಷನ್ ಒಳಗೊಂಡ ಕಿಟ್‍ಗಳನ್ನು ಎಲ್ಲಾ ಕನ್ನಡಿಗರಿಗೆ ಒದಗಿಸಲಾಗುತ್ತಿದೆ. ಈಗಾಗಲೇ ವೈಯಕ್ತಿಕವಾಗಿ 400 ಕ್ವಿಂಟಾಲ್ ಅಕ್ಕಿಯನ್ನು ಒಳಗೊಂಡ ರೇಷನ್ಅನ್ನು ಕಾರ್ಮಿಕರಿಗೆ ನೀಡಲಾಗಿದೆ. ತಮ್ಮ ಕಚೇರಿಯಲ್ಲಿ ಕನ್ನಡಿಗರೇ ಆದ ದಿನೇಶ ಅವರನ್ನು ಕರ್ನಾಟಕದ ಕನ್ನಡಿಗರ ರಕ್ಷಣೆಗಾಗಿ ವಿಶೇಷ ಉಸ್ತುವಾರಿ ಅಧಿಕಾರಿ ಎಂದು ಈ ಕೂಡಲೇ ನೇಮಿಸುತ್ತೇನೆ. ನಿಮ್ಮ ಬಬಲೇಶ್ವರ ಕ್ಷೇತ್ರವೂ ಸೇರಿದಂತೆ ಎಲ್ಲಾ ಕನ್ನಡಿಗರು ಅಗತ್ಯವಿದ್ದಾಗ ದಿನೇಶ ಅವರನ್ನು ಸಂಪರ್ಕಿಸಲು ತಿಳಿಸಿದ್ದೇನೆ ಎಂದು ದೂರವಾಣಿಯಲ್ಲಿ ತಿಳಿಸಿದ್ದಾರೆ.
ಇದೇ ವಿಷಯವನ್ನು ವಿಜಯಪುರ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರಿಗೆ ಎಂ.ಬಿ.ಪಾಟೀಲ್ ತಿಳಿಸಿದ್ದು, ಜಿಲ್ಲೆಯ ಜನರು ಗೋವಾದಲ್ಲಿದ್ದಾರೆ. ತೊಂದರೆಯಾದರೆ ಜಿಲ್ಲಾಡಳಿತದ ಗಮನಕ್ಕೆ ತರಲು ಸೂಚಿಸಿ. ಅಂತವರ ವಿವರಗಳನ್ನು ನೀಡಿದರೆ ನನ್ನ ಪರವಾಗಿ ಬಿ.ಎಲ್.ಡಿ.ಇ ಸಂಸ್ಥೆ ಅಧಿಕಾರಿ ಡಾ. ಮಹಾಂತೇಶ ಬಿರಾದಾರ ಮತ್ತು ಗೋವಾ ಸಚಿವ ಮೈಕಲ್ ಲೋಬೊ ಪರವಾಗಿ ದಿನೇಶ ಗೋವಾದ ಕನ್ನಡಿಗರ ಕುರಿತು ಉಸ್ತುವಾರಿ ನೋಡಿಕೊಳ್ಳುತ್ತಾರೆ. ಅಗತ್ಯವಿದ್ದವರು ಸ್ಥಳೀಯ ಆಡಳಿತಕ್ಕೆ ಸಂಪರ್ಕಿಸಿ ಎಂದು ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.