ವಿಜಯಪುರ: ನನ್ನ ಅಧಿಕಾರವಧಿಯಾಗಲಿ ಅಥವಾ ಪ್ರಧಾನಿ ಮೋದಿಯವರ ಆಡಳಿತದಲ್ಲಿ ಉಳಿದ ಸಮುದಾಯಕ್ಕೆ ನೀಡಿದ ಯೋಜನೆ ಮುಸ್ಲಿಮರಿಗೆ ನೀಡಿಲ್ಲ ಎಂಬ ಒಂದು ಉದಾಹರಣೆ ನೀಡಿದರೆ ನಾನು ರಾಜಕೀಯ ನಿವೃತ್ತಿ ಘೋಷಿಸಲು ಸಿದ್ಧ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪುನರುಚ್ಚಸಿದರು.
ಸಿಂದಗಿ ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಪರ ಸಿಂದಗಿ ಪಟ್ಟಣದ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಧಾನಿ ಮೋದಿ ಅವರು ಎಲ್ಲ ವರ್ಗದ ಜನರನ್ನು ಒಂದೇ ತಾಯಿ ಮಕ್ಕಳಂತೆ ನೋಡ್ತಿದ್ದಾರೆ. ನಾನು ಸಿಎಂ ಆದ ವೇಳೆಯೂ ಹಿಂದೂ, ಮುಸ್ಲಿಂ, ಕ್ರೈಸ್ತ ಎಂಬ ಬೇಧಭಾವ ಮಾಡಿಲ್ಲ. ಕಾಂಗ್ರೆಸ್ ಅಪಪ್ರಚಾರಕ್ಕೆ ಕಿವಿಗೊಡದೆ ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡಿದರು.
ಬಹು ಸಂಖ್ಯೆಯಲ್ಲಿ ಮುಸ್ಲಿಂ ಬಂಧುಗಳಿದ್ದೀರಿ. ನಮ್ಮ ಐವರು ಸಚಿವರು ಇಲ್ಲಿದ್ದಾರೆ. ಇವರು ಸಿಂದಗಿ ಅಭಿವೃದ್ಧಿಗೆ ಶ್ರಮಿಸುತ್ತಾರೆ. ನಮ್ಮ ಪಕ್ಷದ ಬಗ್ಗೆ ಕಾಂಗ್ರೆಸ್ ನಿತ್ಯ ಅಪಪ್ರಚಾರ ಮಾಡುತ್ತಿದೆ. ಚೀಲದಲ್ಲಿ ಹಣ ತಂದು ಬಿಜೆಪಿ ಕೊಡ್ತಿದೆ ಎಂದು ಹೇಳ್ತಿದ್ದಾರೆ. ಹಣ, ಹೆಂಡ ಹಂಚಿ ಅಧಿಕಾರ ಮಾಡಿದವರು ನೀವು, ನಾವಲ್ಲ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಈ ಎರಡೂ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳು ಗೆಲ್ತಾರೆ. ಆ ಮೇಲೆ ನಿಮ್ಮ ಅಪಪ್ರಚಾರಗಳಿಗೆ ತಕ್ಕ ಉತ್ತರ ಕೊಡ್ತೆವೆ. ಹೆಣ್ಣು ಹುಟ್ಟಿದ್ರೆ ಕಣ್ಣೀರು ಹಾಕ್ತಿದ್ದ ಕಾಲದಲ್ಲಿ ಅವಳಿಗೆ ಭಾಗ್ಯಲಕ್ಷ್ಮಿ ಎಂದು ಕರೆದಿದ್ದು ನನ್ನ ಅಧಿಕಾರವಧಿಯಲ್ಲಿ. ರೈತರ ಪಂಪಸೆಟ್ಗೆ ಉಚಿತ ವಿದ್ಯುತ್ ಕೊಟ್ಟಿದ್ದು ಯಡಿಯೂರಪ್ಪ. ಬರುವಂತಹ ದಿನಗಳಲ್ಲಿ ಇನ್ನೂ ಹೆಚ್ಚು ಕೆಲಸ ಮಾಡೋಣ. ಸಿದ್ದರಾಮಯ್ಯ ಸಿಎಂ ಆದಾಗ ಯಾವ ಸಮುದಾಯದವರನ್ನು ಅಭಿವೃದ್ಧಿ ಮಾಡಿಲ್ಲ. ಆದ್ರೆ ನಿಮ್ಮ ಯಡಿಯೂರಪ್ಪ ಸಿಎಂ ಆಗಿದ್ದಾಗ 40 ಕೋಟಿ ಖರ್ಚು ಮಾಡಿ ಕಾಗಿನೆಲೆ ಅಭಿವೃದ್ಧಿ ಮಾಡಿದ್ದೇನೆ ಎಂದರು.