ಮುದ್ದೇಬಿಹಾಳ: ಆಲಮಟ್ಟಿ ಜಲಾಶಯದಿಂದ ಬುಧವಾರ 3.80 ಲಕ್ಷ ಕ್ಯೂಸೆಕ್ ನೀರು ಹೊರಬಿಟ್ಟಿರುವ ಪರಿಣಾಮ ತಾಲೂಕಿನ ಗಂಗೂರ - ಕಮಲದಿನ್ನಿ ರಸ್ತೆ ಮೇಲೆ ಒಂದು ಅಡಿಗಳಷ್ಟು ನೀರು ನಿಂತಿದ್ದು, ಅಡವಿ ಸಿದ್ದೇಶ್ವರ ಕರ್ತೃ ಗದ್ದುಗೆ ಜಲಾವೃತಗೊಂಡಿದೆ.
ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರಿದಂತೆ ತಾಲೂಕಿನ ದೇವೂರ, ಕಮಲದಿನ್ನಿ, ಗಂಗೂರ, ಕುಂಚಗನೂರ, ಹಾಡರಗಲ್ಲ, ನಾಗರಾಳ, ಮುದೂರ, ತಂಗಡಗಿ ಮೊದಲಾದ ನದಿ ತೀರದ ಗ್ರಾಮಸ್ಥರಿಗೆ ನೆರೆ ಭೀತಿ ಶುರುವಾಗಿದೆ.
ಈ ಕುರಿತು ಮಾತನಾಡಿರುವ ತಹಶೀಲ್ದಾರ್ ಬಿ.ಎಸ್. ಕಡಕಭಾವಿ, ಸದ್ಯಕ್ಕೆ ಆಲಮಟ್ಟಿ ಜಲಾಶಯದಿಂದ 3.80 ಲಕ್ಷ ಕ್ಯೂಸೆಕ್ ನೀರು ಹೊರ ಬಿಡಲಾಗಿದೆ. ನೀರಿನ ಪ್ರಮಾಣ ಹೆಚ್ಚುವ ಸಾಧ್ಯತೆ ಇದೆ.
ನೋಡಲ್ ಅಧಿಕಾರಿಗಳ ಸಹಾಯಕ್ಕಾಗಿ ಒಬ್ಬೊಬ್ಬ ಗ್ರಾಮ ಲೆಕ್ಕಾಧಿಕಾರಿಯನ್ನು ನಿಯೋಜಿಸಲಾಗಿದೆ. ಜೊತೆಗೆ ಅಂಗನವಾಡಿ, ಆಶಾ, ಸ್ಥಳೀಯ ಪಂಚಾಯಿತಿ ಸಿಬ್ಬಂದಿ ಸಹ ಪ್ರವಾಹ ಪರಿಸ್ಥಿತಿ ಪರಿಶೀಲನೆಗೆ ನಿಯೋಜಿಸಲಾಗಿದೆ. ಎಷ್ಟು ಮನೆಗಳಿಗೆ ನೀರು ಬರುತ್ತದೆ?, ಜಮೀನು ಮುಳುಗಡೆ ಪ್ರದೇಶ, ಯಾವ ಜಮೀನಿನಲ್ಲಿ ಯಾವ ಬೆಳೆ ಇದೆ ಎಂಬ ಬಗ್ಗೆ ಮಾಹಿತಿ ಸಮೀಕ್ಷೆ ಮಾಡಿ ವರದಿ ಸಲ್ಲಿಸುವಂತೆ ಸೂಚನೆ ನೀಡಿರುವುದಾಗಿ ಹೇಳಿದರು.
ಕಾಳಜಿ ಕೇಂದ್ರಗಳ ಸಿದ್ಧತೆ:
ಕೃಷ್ಣಾ ನದಿ ನೀರಿನ ಪ್ರವಾಹ ಹೆಚ್ಚಳವಾದರೆ 9 ಗ್ರಾಮಗಳು ಸಂಕಷ್ಟಕ್ಕೀಡಾಗಲಿದ್ದು, ಅಲ್ಲಿನ ಗ್ರಾಮಸ್ಥರಿಗೆ ಅಗತ್ಯ ವಸತಿ, ಊಟದ ವ್ಯವಸ್ಥೆಗಾಗಿ ಕಾಳಜಿ ಕೇಂದ್ರಗಳನ್ನು ಸಜ್ಜುಗೊಳಿಸಲಾಗುತ್ತಿದೆ. ಆಹಾರ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಸಿದ್ಧವಾಗಿಟ್ಟುಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡುರುವುದಾಗಿ ತಹಶೀಲ್ದಾರ್ ಬಿ.ಎಸ್. ಕಡಕಭಾವಿ ತಿಳಿಸಿದರು.
ಈ ವೇಳೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಸ್.ವೈ ಹೊಕ್ರಾಣಿ, ಎಂ.ಬಿ.ಬಿರಾದಾರ, ಕಂದಾಯ ನಿರೀಕ್ಷಕ ಎಸ್.ಎಸ್.ಮಾಗಿ, ಸಿಬ್ಬಂದಿ ಸಂಜು, ಜಾಧವ ಮೊದಲಾದವರು ಉಪಸ್ಥಿತರಿದ್ದರು.