ವಿಜಯಪುರ: ಭೀಮಾ ತೀರದ ಮಹಾದೇವ ಸಾಹುಕಾರ ಭೈರಗೊಂಡ ಮೇಲೆ ನಡೆದಿದ್ದ ಗುಂಡಿನ ದಾಳಿಯಲ್ಲಿ ಭಾಗಿಯಾದ 5 ಆರೋಪಿಗಳನ್ನ ಬಂಧಿಸಲಾಗಿದೆ ಎಂದು ಎಸ್ಪಿ ಅನುಪಮ್ ಅಗರವಾಲ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅತಾಲಟ್ಟಿ ಗ್ರಾಮದ ಯಾಶೀನ ತಮನಸಾಬ್ ದಂದರಗಿ (25), ಕರೆಪ್ಪ ಮಹಾದೇವ ಸೊನ್ನದ (25) , ಸಿದ್ದಾರಾಯ್ ಬಸಪ್ಪ ಬೊಬ್ಬನಜೋಗಿ (34), ಅಲಿಯಾದ ಗ್ರಾಮದ ಸಂಜು ತುಕಾರಾಮ್ ಮಾನವರ ಹಾಗೂ ಚಡಚಣದ ರವಿ ಬಂಡಿ (20) ಎಂಬುವವರನ್ನು ಬಂಧಿಸಲಾಗಿದೆ. ವಿವಿಧ ಕಡೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನ ಬಂಧಿಸಲಾಗಿದೆ ಎಂದು ಎಸ್ಪಿ ಅನುಪಮ್ ಅಗರವಾಲ್ ತಿಳಿಸಿದರು.
ಮೊದಲೇ ಪ್ಲಾನ್ ಮಾಡಿ ದಾಳಿ ನಡೆಸಲಾಗಿದೆ. ಇದುವರೆಗೂ ಒಟ್ಟು 7 ಆರೋಪಿಗಳನ್ನು ಬಂಧಿಸಲಾಗಿದೆ. ಕೃತ್ಯದಲ್ಲಿ ಭಾಗಿಯಾದವರನ್ನ ಹಾಗೂ ಗುಂಡಿನ ದಾಳಿಯಲ್ಲಿ ಭಾಗಿಯಾಗಿರುವ ಕಾಣದ ಕೈಗಳನ್ನ ಪತ್ತೆ ಮಾಡುವ ಕಾರ್ಯವನ್ನು ನಡೆಸಿದ್ದಾರೆ. ಬಂಧಿತರಿಂದ 2 ಕಂಟ್ರಿ ಪಿಸ್ತೂಲ್, 5 ಗುಂಡುಗಳು, 4 ಮೊಬೈಲ್, ಒಂದು ಮಚ್ಚು ಹಾಗೂ ಆಟೋರಿಕ್ಷಾ ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದ್ದಾರೆ.