ವಿಜಯಪುರ: ಕೊರೊನಾ ಲಾಕ್ಡೌನ್ ತೆರವಿನ ನಂತರ ಚಿತ್ರ ಪ್ರದರ್ಶನಕ್ಕೂ ಅವಕಾಶ ದೊರೆತಿದೆ. ಕೆಲ ಕೋವಿಡ್ ನಿಯಮಗಳನ್ನನುಸರಿಸಿ ಥಿಯೇಟರ್ಗಳನ್ನು ತೆರೆಯುವಂತೆ ಹಲವೆಡೆ ಅನುಮತಿ ದೊರೆತಿದ್ದರೆ, ವಿಜಯಪುರದಲ್ಲೂ ಸಿನಿಪ್ರಿಯರಿಗೆ ನಿರಾಸೆ ಉಂಟಾಗಿದೆ.
ಚಿತ್ರ ಪ್ರದರ್ಶನಕ್ಕೆ ಸರ್ಕಾರ ಅನುಮತಿ ನೀಡಿದ್ದು, ಹಲವೆಡೆ ಥಿಯೇಟರ್ ಮಾಲೀಕರು ಚಿತ್ರ ಮಂದಿರದ ಧೂಳು ಹೊಡೆದು, ಸ್ವಚ್ಛ ಮಾಡಿ ಸಿನಿಮಾ ಪ್ರದರ್ಶನಕ್ಕೆ ಸಜ್ಜಾಗುತ್ತಿದ್ದಾರೆ. ಅದೇ ರೀತಿ ಸಿನಿಮಾ ವೀಕ್ಷಣೆಗೆ ಸಿನಿ ಪ್ರಿಯರೂ ಕೂಡ ತುದಿಗಾಲಿನಲ್ಲಿ ನಿಂತಿದ್ದಾರೆ. ಆದರೆ, ವಿಜಯಪುರದಲ್ಲಿ ಬೆಳಗಿನಿಂದ ಚಿತ್ರ ಮಂದಿರದ ಬಾಗಿಲು ತೆರೆಯಲಿಲ್ಲ. ಸರ್ಕಾರ ಚಿತ್ರಮಂದಿರದ ಮಾಲೀಕರಿಗೆ 1.20 ಲಕ್ಷ ರೂಪಾಯಿ ತೆರಿಗೆ ಏರಿಕೆ ಮಾಡಿರುವುದು ಇದಕ್ಕೆ ಕಾರಣವಾಗಿದೆ.
ಇತ್ತ ಮಾರ್ಚ್ ತಿಂಗಳಿನಿಂದ ಥಿಯೇಟರ್ಗಳು ಕಾರ್ಯನಿರ್ವಹಿಸದೆ ಕಂಗಾಲಾಗಿರುವ ಮಾಲೀಕರು ಸರ್ಕಾರ ಸದ್ಯ ಥಿಯೇಟರ್ಗಳಿಗೆ ಅನ್ಲಾಕ್ ಘೋಷಿಸಿದ್ದಕ್ಕೆ ಸಂತಸಪಟ್ಟಿದ್ದರು. ಆದರೆ ತೆರಿಗೆ ಏರಿಕೆಯಿಂದಾಗಿ ಥಿಯೇಟರ್ ತೆರೆಯುವ ನಿರ್ಧಾರವನ್ನೇ ಕೈಬಿಟ್ಟಿದ್ದು, ಒಂದು ವಾರದಲ್ಲಿ ಚಿತ್ರ ಮಂದಿರಗಳ ತೆರಿಗೆ ಕಡಿಮೆ ಮಾಡಬೇಕೆಂದು ಪಟ್ಟು ಹಿಡಿದಿದ್ದಾರೆ.
ಜಿಲ್ಲೆಯಲ್ಲಿ 18 ಥಿಯೇಟರ್ಗಳಿದ್ದು, ವಿಜಯಪುರ ನಗರದಲ್ಲೇ 6 ಚಿತ್ರ ಮಂದಿರಗಳಿವೆ. ಸರ್ಕಾರ ತೆರಿಗೆ ಕಡಿಮೆ ಮಾಡದೆ ಹೋದ್ರೆ ಥಿಯೇಟರ್ಗಳು ತೆರೆಯಲ್ಲ. ಇತ್ತ ಚಿತ್ರ ಮಂದಿರದ ಕೂಲಿಕಾರರು ಉದ್ಯೋಗವಿಲ್ಲದೆ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದು, ಜೀವನ ನಡೆಸಲು ಪರದಾಡುವಂತಾಗಿದೆ.