ಮುದ್ದೇಬಿಹಾಳ: ತಾಲೂಕಿನ ಕೋಳೂರ ಗ್ರಾಮದಲ್ಲಿರುವ ಬಸವೇಶ್ವರ ದೇವಸ್ಥಾನದ ಹತ್ತಿರದಲ್ಲಿರುವ ಕುಡಿಯುವ ನೀರಿನ ಬಾವಿಯ ಸುತ್ತಮುತ್ತಲೂ ಅನೈರ್ಮಲ್ಯಕರ ವಾತಾವರಣ ಇದ್ದು, ಕೂಡಲೇ ಅದನ್ನು ಸ್ವಚ್ಛಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಗ್ರಾಮದಲ್ಲಿ ಎರಡು ಸಾವಿರಕ್ಕೂ ಅಧಿಕ ಜನರು ಇದೇ ಬಾವಿಯ ನೀರನ್ನು ಕುಡಿಯಲು ಬಳಸುತ್ತಾರೆ. ಆದರೆ ಬಾವಿಗೆ ಹೋಗುವ ದಾರಿಯಲ್ಲಿ ಕೊಳಚೆ ನೀರು ಸಂಗ್ರಹವಾಗಿದ್ದು, ಅದನ್ನು ತೆರವುಗೊಳಿಸಿ ಗರಸು ಮಣ್ಣು ಹಾಕಿ ತಿರುಗಾಡಲು ವ್ಯವಸ್ಥೆ ಕಲ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಕುರಿತು ಗ್ರಾಮದ ಸಮಸ್ಯೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಾಗೂ ಫೋಟೋ ಹಂಚಿಕೊಂಡಿರುವ ಗ್ರಾಮದ ಯುವಕ ಷಣ್ಮುಖ ಗೋಲಗೇರಿ, ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಬಾವಿಯ ಸುತ್ತಮುತ್ತಲೂ ಸಂಗ್ರಹವಾಗುವ ನೀರು ಇಂಗಿ ಅದನ್ನೇ ಕುಡಿಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದರಿಂದ ಮುಂಬರುವ ದಿನಗಳಲ್ಲಿ ವಾಂತಿ-ಭೇಧಿ ಶುರುವಾಗುವ ಆತಂಕ ಎದುರಾಗಿದೆ ಎಂದು ದೂರಿದ್ದಾರೆ.