ವಿಜಯಪುರ: ಜಮೀನಿನಲ್ಲಿ ವಿದ್ಯುತ್ ಸ್ಥಾವರ ನಿರ್ಮಾಣ ಮಾಡದಂತೆ ಒತ್ತಾಯಿಸಿ ರೈತರು ಮುದ್ದೇಬಿಹಾಳದಲ್ಲಿ ನಡೆಸುತ್ತಿರುವ ಹೋರಾಟ ತಾರಕಕ್ಕೇರಿದ್ದು, ಪ್ರತಿಭಟನಾ ಸ್ಥಳದಲ್ಲಿಯೇ ರೈತರು ವಿಷ ಕುಡಿಯಲು ಯತ್ನಿಸಿದರು.
ಪೀರಾಪುರ ಬೂದಿಹಾಳ ಏತ ನೀರಾವರಿ ಯೋಜನೆಗೆ ಸಂಬಂಧಿಸಿ ರೈತರ ಜಮೀನಿನಲ್ಲಿ ವಿದ್ಯುತ್ ಸ್ಥಾವರ ನಿರ್ಮಾಣ ಮಾಡದಂತೆ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಗ್ರಾಮದ ಬಳಿ ರೈತರು ವಿಷ ಕುಡಿಯಲು ಮುಂದಾದರು. ಸ್ಥಳದಲ್ಲಿದ್ದ ಪೊಲೀಸರು ವಿಷದ ಬಾಟಲ್ ಕಸಿದುಕೊಂಡು ಪರಿಸ್ಥಿತಿ ತಿಳಿಗೊಳಿಸಿದರು.
ಏನೇ ಆಗಲಿ ಜಮೀನಿನಲ್ಲಿ ವಿದ್ಯುತ್ ಸ್ಥಾವರ ನಿರ್ಮಾಣ ಮಾಡಬಾರದು ಎಂದು ರೈತರು ಪಟ್ಟು ಹಿಡಿದಿದ್ದರು. ಇನ್ನು ರೈತರ ಮನವೊಲಿಕೆಗೆ ಕೆಬಿಜೆಎನ್ಎಲ್ ಅಧಿಕಾರಿಗಳು ಯತ್ನಿಸಿದರಾದರೂ ಬಗ್ಗದ ರೈತರು ಹೋರಾಟ ಮುಂದುವರೆಸಿದ್ದಾರೆ.